Gandhakuti

ಪ್ರೊ. ಎಸ್.ಜಿ. ಸಿದ್ಧರಾಮಯ್ಯ 

ನನ್ನ ನಂತರದ ತಲೆಮಾರಿನ ಕೆಲವು ವ್ಯಕ್ತಿಗಳು ನನ್ನನ್ನು ಹೆಚ್ಚು ಪ್ರಭಾವಿಸಿದ್ದಾರೆ. ಅವರೆಲ್ಲ ಸಾಮಾಜಿಕವಾಗಿ ಜಾಗೃತಿ ಮೂಡಿಸುವ ಕೆಲಸದಲ್ಲಿ ತೊಡಗಿರುವವರು ಹಾಗೂ ವಿಶೇಷವಾಗಿ ಅವರ ಬದುಕಿನ ಕ್ರಮದಿಂದಾಗಿ ನನ್ನನ್ನು ಹೆಚ್ಚು ಆಕರ್ಷಿಸಿದವರು. ಅವರಲ್ಲಿ ಲಕ್ಷ್ಮೀಪತಿ ಕೋಲಾರ, ಕೆ.ವೈ.ನಾರಾಯಣಸ್ವಾಮಿ ಮತ್ತು ಬಂಜಗೆರೆ ಜಯಪ್ರಕಾಶ್ ಬಹಳ ಮುಖ್ಯವಾದವರು. ಚಳವಳಿಗಳು ಸ್ಥಗಿತಗೊಂಡ ಕಾಲಘಟ್ಟದ ನಂತರ ಆ ಚಳವಳಿಗಳ ಆಶಯಗಳನ್ನು ತಮ್ಮ ಎದೆಗೆ ತುಂಬಿಕೊಂಡು ಅದರಂತೆ ಬದುಕುತ್ತಾ, ತಮ್ಮ ತಲೆಮಾರಿನವರನ್ನು, ನಂತರದ ಪೀಳಿಗೆಯವರನ್ನು ಹೆಚ್ಚು ಕ್ರಿಯಾಶೀಲಗೊಳಿಸುವ ಕಾರ್ಯದಲ್ಲಿ ತೊಡಗಿರುವ ಈ ಮೂರೂ ವ್ಯಕ್ತಿಗಳು ತಮ್ಮ ಬದುಕು ಮತ್ತು ಬರಹ ಅಭಿನ್ನವಾದ ರೀತಿಯಲ್ಲಿ ಬಾಳುತ್ತಿರುವವರು. ಈ ಕಾರಣಗಳಿಂದ ನನಗೆ ಅವರ ಬಗ್ಗೆ ಬಹಳ ದೊಡ್ಡ ಗೌರವವಿದೆ ಹಾಗೂ ನಾನು ಕೂಡ ಇವರಿಂದ ಸಾಕಷ್ಟು ಕಲಿತಿದ್ದೇನೆ ಎನ್ನುವ ಹೆಮ್ಮೆಯಿದೆ.
ಬಂಜಗೆರೆ ಜಯಪ್ರಕಾಶರನ್ನು ಎಲ್ಲರೂ ಜೇಪಿ ಎಂದೇ ಪ್ರೀತಿಯಿಂದ ಕರೆಯುತ್ತಾರೆ. ನನ್ನ ಮಟ್ಟಿಗೆ ಕನ್ನಡದ ಸಾಮಾಜಿಕ- ಸಾಂಸ್ಕೃತಿಕ ಮತ್ತು ರಾಜಕೀಯ ವಾತಾವರಣದಲ್ಲಿ ಅದೊಂದು ಉರಿಯುವ ಹೆಸರು, ಅದು ಬೆಂಕಿಯಂತೆ ಉರಿಯುವ ಗುಣದ್ದಲ್ಲ; ದೀವಿಗೆಯ ರೀತಿಯದ್ದು, ದೀವಿಗೆಯ ಬತ್ತಿ ಮತ್ತು ತೈಲಗಳು ಪರಸ್ಪರ ಸುಟ್ಟುಕೊಂಡು ಬೆಳಕನ್ನು ಕೊಡುತ್ತವೆ. ಹಾಗೆ ತನ್ನ ಬದುಕನ್ನು ಸುಟ್ಟುಕೊಳ್ಳುತ್ತಾ ನಾಡಿನ ಸಾಂಸ್ಕೃತಿಕ- ಸಾಮಾಜಿಕ ವಾತಾವರಣಕ್ಕೆ ಜೇಪಿ ತಮ್ಮ ವಿಚಾರವಂತಿಕೆಯ ಮೂಲಕ ಬೆಳಕು ನೀಡುತ್ತಿದ್ದಾರೆ ಅನ್ನುವುದರಲ್ಲಿ ಅತಿಶಯೋಕ್ತಿ ಇಲ್ಲ.

ಇವತ್ತಿನ ಕನ್ನಡ ಸಾಂಸ್ಕೃತಿಕ ಪರಿಸರದಲ್ಲಿ ಜೇಪಿ ಮಾತಿಗೆ ವಿಶಿಷ್ಟ ಸ್ಥಾನವಿದೆ. ಪರಂಪರೆಯ ಬೇರುಗಳ ವಿಸ್ತಾರ ಹಾಗೂ ವರ್ತಮಾನದ ವಿದ್ಯಮಾನಗಳ ಸಮರ್ಥ ವಿಶ್ಲೇಷಣೆ ಅವರ ಮಾತಿನಲ್ಲಿರುತ್ತದೆ. ನಾನು ಅವರ ಆಲೋಚನೆಗಳನ್ನು ಸಂಪೂರ್ಣ ಒಪ್ಪಿ ಈ ಮಾತುಗಳನ್ನು ಹೇಳುತ್ತಿಲ್ಲವಾದರೂ, ಜಡ್ಡುಗಟ್ಟಿದ ಸಮಾಜಕ್ಕೆ ಚಿಕಿತ್ಸೆ ನೀಡಲು ಬೇಕಾಗಿರುವ ಚಿಂತನಶೀಲ ಪ್ರಖರ ವೈಚಾರಿಕತೆ ಅವರ ಮಾತುಗಳಲ್ಲಿದೆ ಅನ್ನುವುದನ್ನು ಒಪ್ಪಿ ಈ ಮಾತುಗಳನ್ನು ಹೇಳುತ್ತಿದ್ದೇನೆ. ಇಂಥ ವೈಚಾರಿಕ ಪ್ರಖರತೆ ಇವತ್ತಿಗೆ ತುಂಬಾ ಅಗತ್ಯವಾಗಿರುವಂತಾದ್ದು, ಇದರಿಂದಾಗಿ ನಮ್ಮ ನಾಡಿನ ಸಾಕಷ್ಟು ಯುವಮನಸ್ಸುಗಳು ಸರಿದಾರಿಯಲ್ಲಿ ನಡೆಯುತ್ತಿವೆ. ಈ ಕಾರಣದಿಂದಾಗಿ ವರ್ತಮಾನದ ಸಂಕಷ್ಟಗಳನ್ನು ವಿಶ್ಲೇಷಿಸುವುದಕ್ಕೆ ಜೇಪಿ ಬಳಸುತ್ತಿರುವ ಪರಿಕರಗಳು ಚಾರಿತ್ರಿಕ ಮತ್ತು ಪೌರಾಣಿಕ ಏರುಪೇರುಗಳನ್ನು ತಿದ್ದುವ ಆ ಮೂಲಕ ವರ್ತಮಾನವನ್ನು ತಿಳಿಗೊಳಿಸುವ ಕಾರ್ಯ ಮಾಡುತ್ತವೆ. ಜೇಪಿ ತಮ್ಮ ವಿದ್ಯಾರ್ಥಿ ದೆಸೆಯಿಂದಲೇ ಹೆಚ್ಚು ಕ್ರಿಯಾಶೀಲವಾಗಿ ಜನಪರ ಹೋರಾಟಗಳಲ್ಲಿ ತೊಡಗಿಕೊಂಡವರು. ಅದಕ್ಕಾಗಿ ಸಾಕಷ್ಟು ಸಂಕಷ್ಟಗಳನ್ನು ನೋವುಗಳನ್ನೂ ಅನುಭವಿಸಿದವರು. ಅವರು ವಿದ್ಯಾರ್ಥಿ ದೆಸೆಯಲ್ಲಿ ಸಾಂಪ್ರದಾಯಿಕ ಆವರಣದ ಹೊರಗೆ ಕಲಿತದ್ದೂ ಇದಕ್ಕೆ ಕಾರಣವಾಯಿತು ಎಂಬುದನ್ನು ನಾವು ಗಮನಿಸಬೇಕು. ಸಾಂಪ್ರದಾಯಿಕ ಆವರಣ ನಮ್ಮನ್ನು ಕುಲ್ಲವಾಗಿಸುತ್ತದೆ ಎಂಬುದನ್ನು ಜೇಪಿ ಆ ವಯಸ್ಸಿಗೇ ಅರಿತಿದ್ದರು. ಅವರು ಪಠ್ಯದಾಚೆಗೆ ತೆರೆದುಕೊಂಡ ಕಾರಣಕ್ಕೆ ನಮ್ಮ ಬಹುತ್ವದ ದಾರಿಗಳಲ್ಲಿ ನಡೆಯುವಂತೆ ಮಾಡಿತು. ಕೇವಲ ಆಲೋಚಿಸುವುದು ಮತ್ತು ಕ್ರಿಯಾಶೀಲವಾಗಿ ಆಲೋಚಿಸುವುದು ಬೇರೆ ಬೇರೆ; ಜೇಪಿ ಕ್ರಿಯಾಶೀಲವಾದ ಆಲೋಚನೆಗಳಿಂದ ತಮ್ಮ ದಾರಿಯನ್ನು ಕಂಡುಕೊಂಡವರು. ಈ ಕ್ರಿಯಾಶೀಲ ಆಲೋಚನೆಯ ಕಾರಣಕ್ಕೆ ಜೇಪಿ ಹಲವು ರೀತಿಯ ನೋವನ್ನೂ ಅನುಭವಿಸುವಂತಾಯಿತು. ಈ ಕಾರಣದಿಂದಾಗಿ ಅರಿವಿನ ದೊಂದಿ ಹಿಡಿದು ನಡೆಯಲು ಅವರಿಗೆ ಸಾಧ್ಯವಾಯಿತು ಹಾಗೂ ಅವರಿಗೆ ಆ ದೊಂದಿಯ ಬೆಳಕಲ್ಲಿ ನಮ್ಮ ಪರಂಪರೆಯ, ಚರಿತ್ರೆಯ, ವರ್ತಮಾನದ ಹುಳುಕುಗಳು ಕಾಣಿಸಿದವು. ಆಗ ಅವರಿಗೆ ಅವುಗಳೊಳಗಿನ ಸಮಾಜ ವಿರೋಧಿ, ಮನುಷ್ಯ ವಿರೋಧಿ ಚಿಂತನೆಗಳು ಕಾಣಿಸಿದವು; ಹಾಗೆ ಕಂಡದ್ದನ್ನು ಬೆನ್ನುಹತ್ತಿ ಬಗೆದು ಸಮಾಜದೆದುರು ಇಡಲು ಅವರಿಗೆ ಸಾಧ್ಯವಾಯಿತು. ಅವರ ಸಂಶೋಧನೆ ಮತ್ತು ಬರಹಗಳು ಹೀಗೆ

ಒಡಮೂಡಿದಂತಹವು.
ನಮ್ಮ ಕಾಲಮಾನದಲ್ಲಿ ಸಾಕಷ್ಟು ಚಳವಳಿಗಳು ನಡೆದಿವೆ. ಬಂಡಾಯ ಸಾಹಿತ್ಯ ಚಳವಳಿ, ದಲಿತ ಚಳವಳಿ, ರೈತ ಚಳವಳಿ ಮುಖ್ಯವಾದವು. ಇಂಥಾ ಚಳವಳಿಗಳನ್ನು ಹುಟ್ಟಿಹಾಕುವುದು ಸುಲಭ; ಆದರೆ, ನೈತಿಕ ಎಚ್ಚರದಲ್ಲಿ ಅವುಗಳನ್ನು ಮುನ್ನಡೆಸುವ

ಹೊಣೆಗಾರಿಕೆ ದೊಡ್ಡದು. ಇಂಥಾ ಹೊಣೆಗಾರಿಕೆಯನ್ನು ನಿರ್ವಹಿಸುವುದರಲ್ಲಿ ನಮ್ಮ ನಾಯಕರು ಸೋತರು. ಹಾಗೆ ಆಗಿದ್ದರಿಂದ ಇವತ್ತು ಬಲಪಂಥೀಯ ಸಂಘಟನೆಗಳು, ಜಾತಿವಾದಿ ಸಂಘಟನೆಗಳು ಬಲಗೊಳ್ಳಲು ಅವಕಾಶವಾಯಿತು. ಇದರ ಪರಿಣಾಮವಾಗಿ ವ್ಯಕ್ತಿಸ್ವಾತಂತ್ರ್ಯದ ಮೇಲಿನ ಹಲ್ಲೆಯಂತಹ ಅಸಂವಿಧಾನಿಕ ಚಟುವಟಿಕೆಗಳು ಹೆಚ್ಚಾದವು. ಈ ಎಲ್ಲಾ ಬೆಳವಣಿಗೆಗಳನ್ನೂ ನಾವು ತುಳಿತಕ್ಕೊಳಗಾದ ಸಮುದಾಯಗಳ ಕಣೋಟದಲ್ಲೇ ಅರ್ಥಮಾಡಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಬಸವಣ್ಣನವರ ಬಗ್ಗೆ ಜೇಪಿ ಹುಟ್ಟುಹಾಕಿದ ಚರ್ಚೆ ಬಹಳ ಮುಖ್ಯವಾದದ್ದು, ಈ ಕಾರಣದಿಂದಲೇ ಜೇಪಿಯವರನ್ನು ನಾನು ಉರಿಯುವ ದೀವಿಗೆಗೆ ಹೋಲಿಸಿದ್ದು,
ಜೇಪಿಯವರ ಇಂಥಾ ಪ್ರಖರ ವೈಚಾರಿಕತೆಯ ಕಾರಣಕ್ಕೆ ಬಹಳಷ್ಟು ಯುವಜನತೆ ಅವರ ಪ್ರಭಾವಕ್ಕೆ ಒಳಗಾಗಿದ್ದಾರೆ. ಇದೊಂದು ತಾತ್ವಿಕ ನಡೆಯಾಗಿದ್ದು, ಬರೆಯುವ, ಮಾತನಾಡುವ, ವರ್ತಮಾನದ ತಲ್ಲಣಗಳಿಗೆ ತಕ್ಷಣ ಸ್ಪಂದಿಸುವ ವೈಜ್ಞಾನಿಕ- ವೈಚಾರಿಕವಾದ ಹೊಸ ತಲೆಮಾರೊಂದು ಸೃಷ್ಟಿಯಾಗುತ್ತಿರುವುದು ದೊಡ್ಡ ಭರವಸೆಯೆಂದೇ ಭಾವಿಸುತ್ತೇನೆ. ದಮನಿತರನ್ನು ಮಾನವೀಯ ಪ್ರಜ್ಞೆಯುಳ್ಳವರನ್ನು, ಕ್ರಾಂತಿಕಾರಿ ಮನಸ್ಸುಗಳನ್ನು ಸಂಘಟಿಸುವ, ಆ ಮೂಲಕ ರೋಗಗ್ರಸ್ಥ ಸಮಾಜಕ್ಕೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಈ ತಲೆಮಾರು ಅಣಿಗೊಳ್ಳುತ್ತಿರುವುದು ಕನ್ನಡ ನೆಲದ ಮಟ್ಟಿಗೆ ಮಹತ್ತರವಾದುದು. ಈ ಮಹತ್ತರವಾದ ಪ್ರಕ್ರಿಯೆಯ ಹಿಂದೆ ಜೇಪಿಯಂತಹವರು ಇದ್ದಾರೆ ಎಂಬುದೇ ನಮ್ಮಂಥವರು ಕೊಂಚ ನೆಮ್ಮದಿಯಿಂದ ಬದುಕಲು ಇಂಬುನೀಡಿದೆ. ಜೇಪಿ ಅವರ ಪ್ರಖರ ಆಲೋಚನಾ ಮಾರ್ಗ ಇನ್ನಷ್ಟು ವಿಸ್ತಾರಗೊಳ್ಳಲಿ; ಅವರು ಹಿಡಿದು ನಡೆಯುತ್ತಿರುವ ದೀವಿಗೆಯ ಬೆಳಕಲ್ಲಿ ಇನ್ನಷ್ಟು ಸಮಾನತೆಯ ಹೂಗಳು ಅರಳಲಿ ಎಂದು ಆಶಿಸುತ್ತೇನೆ.