Gandhakuti

ಗಾಂಧಿವಾದವು ಗಾಂಧಿಯ ನಂತರ ತಳೆದಿರುವ ಹಲವು ರೂಪಾಂತರಗಳಲ್ಲಿ ತೋರಿಕೆಯ ಗಾಂಧಿವಾದವೂ ಒಂದು. ಅಸ್ತಿತ್ವದಲ್ಲಿರುವ ಕೆಲವನ್ನು ಸ್ಥೂಲವಾಗಿ ಎಡಗಾಂಧಿವಾದ ಬಲಗಾಂಧಿವಾದ ಎಂದು ವಿಂಗಡಿಸಬಹುದು ಎಂದು ನಾನು ಅಂದುಕೊಳ್ಳುತ್ತೇನೆ.

ಈ ಎಡ ಬಲಕ್ಕೆ ಉದಾಹರಣೆಯಾಗಿ ನಾನು ಇಬ್ಬರು ವ್ಯಕ್ತಿಗಳನ್ನು ಸೂಚಿಸಬಯಸುತ್ತೇನೆ. ಒಬ್ಬರು ರಾಜ್ಯಮಟ್ಟದಲ್ಲಿ ಹೆಚ್ಚು ಸಕ್ರಿಯವಾಗಿದ್ದ ಎಚ್ ಎಸ್ ದೊರೆಸ್ವಾಮಿಯವರು. ಮತ್ತೊಬ್ಬರು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುವ ಅಣ್ಣಾ ಹಜಾರೆಯವರು. ಎಡಗಾಂಧಿವಾದಕ್ಕೆ ಎಚ್ ಎಸ್ ದೊರೆಸ್ವಾಮಿಯವರು ಅಪ್ಪಟ ಉದಾಹರಣೆಯಾದರೆ ಬಲಗಾಂಧಿವಾದಕ್ಕೆ ಅಣ್ಣಾ ಹಜಾರೆ ಅಪ್ರತಿಮ ಉದಾಹರಣೆ.

ಇವರಿಬ್ಬರ ಕಾರ್ಯಾಚರಣೆಯ ವಿಧಾನದಲ್ಲಿ ಕೂಡ ಈ ವ್ಯತ್ಯಾಸವನ್ನು ಗುರುತಿಸಬಹುದು. ಒಬ್ಬರು ರಾಜ್ಯಮಟ್ಟದಲ್ಲಿ ಮಾತ್ರ ಹೆಸರಾಗಲು ಸಾಧ್ಯವಾಗಿದ್ದು ಮತ್ತೊಬ್ಬರು ರಾಷ್ಟ್ರಮಟ್ಟದಲ್ಲಿ ಹೆಸರಾಗಲು ಕಾರಣಗಳೂ ಕೂಡ ಈ ಎಡ ಬಲದಲ್ಲೇ ಇವೆ. ದೊರೆಸ್ವಾಮಿಯವರು ಆಳುವ ಮಂದಿಯ ಮರ್ಜಿಗೆ ಹೋಗುವವರಲ್ಲ. ರಾಷ್ಟ್ರೀಯ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಕಾಣಿಸಿಕೊಳ್ಳುವವರಲ್ಲ. ಅವರು ಸ್ಥಳೀಯ ಜನಪರವಾದ ಸಣ್ಣಪುಟ್ಟ ವೇದಿಕೆಗಳ ಹೋರಾಟದಲ್ಲಿ ಸಕ್ರಿಯರಾಗಿರುತ್ತಾರೆ. ಜನರ ಸಮಸ್ಯೆಗಳ ಪರವಾಗಿ ಸರ್ಕಾರಗಳನ್ನು ವಿರೋಧಿಸುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ. ಕೋಮುವಾದಿಗಳನ್ನು ಖಂಡತುಂಡವಾಗಿ ವಿರೋಧಿಸುತ್ತಾರೆ. ಗುಪ್ತವಾಗಿ ಕೂಡ ಜಾತಿವಾದವನ್ನು ಅನುಸರಿಸುವುದಿಲ್ಲ.

ಸಾಮ್ರಾಜ್ಯವಾದ ಮತ್ತು ಜಾಗತೀಕರಣದ ಬಗ್ಗೆ ಸ್ಪಷ್ಟ ವಿರೋಧ ವ್ಯಕ್ತಪಡಿಸುತ್ತಾರೆ. ದೊಡ್ಡ ಸಾಂಸ್ಥಿಕ ರಚನೆಗಳನ್ನು ರಚಿಸಿಕೊಂಡು ಅದರ ನಿರ್ವಹಣೆಯಲ್ಲಿ ತಾವೇ ‘ದಾದಾ’, ‘ಬಾಬಾ’ ಆಗಿ ವ್ಯವಹರಿಸುವುದಿಲ್ಲ. ಮುಖ್ಯವಾಗಿ ಆಳುವ ವರ್ಗಗಳ ಯಾವುದೋ ವಲಯದ ಜೊತೆ ಗುಪ್ತವಾಗಿ ‘ಮಿಲಾಖತ್’ ಆಗಿ ತಮ್ಮ ಹೋರಾಟದ ಕಾರ್ಯಕ್ರಮಗಳನ್ನು ರೂಪಿಸುವುದಿಲ್ಲ. ದೊರೆಸ್ವಾಮಿ ಅವರಿಗೆ ಗೌರವಿಸುವ ಗುಂಪಿದೆ. ಹೆಗಲ ಮೇಲೆ ಹೊತ್ತು ತಿರುಗುವ, ಕೀರ್ತಿಸಿ ಹೊಗಳುವ ‘ಭಕ್ತ’ಪಡೆ ಇಲ್ಲ. ಆ ಬಗೆಯ ಭಕ್ತಗಣ ಏರ್ಪಾಡಾಗಲಿ ಎಂದು ಗುಪ್ತವಾಗಿ ಆಶಿಸುತ್ತಾ, ಇಮೇಜ್ ಬೆಳೆಸಿಕೊಳ್ಳುವ ಹುನ್ನಾರಗಳನ್ನು ಅವರು ಹೆಣೆಯುವುದಿಲ್ಲ.

ಜನಸಾಮಾನ್ಯರ ಜೊತೆ ಸಾಮಾನ್ಯರಾಗಿ ಬೆರೆಯುತ್ತಾರೆ. ಅವರಿಗೆ ಪಿ.ಎ.ಗಳಿಲ್ಲ. ಯಾವ ಪಕ್ಷಕ್ಕೂ ರಾಜಗುರು ಅಲ್ಲ. ಯಾವ ರಾಜಕಾರಣಿಯೂ ತಾನಿವರ ಶಿಷ್ಯ, ಅನುಯಾಯಿ ಎಂದು ಹೇಳಿಕೊಂಡಿಲ್ಲ. ಜನಪರವಾದ ಹೋರಾಟ, ಚಟುವಟಿಕೆ ಎಂದು ನಂಬಿಕೆ ಬಂದರೆ ಯಾರ ಶಿಫಾರಸ್ಸೂ ಇಲ್ಲದೆ ತಮ್ಮ ಸ್ವಇಚ್ಛೆಯಿಂದ ಅದರಲ್ಲಿ ಪಾಲ್ಗೊಳ್ಳುತ್ತಾರೆ. ಅದು ದೊಡ್ದದು, ಚಿಕ್ಕದು ಎಂದು ತಾರತಮ್ಯ ಮಾಡುವುದಿಲ್ಲ. ಭಾಷಾ ಚಳವಳಿ, ರೈತ ಚಳವಳಿ, ದಲಿತ ಚಳವಳಿ, ಪರಿಸರ ಚಳವಳಿ, ಎಡಪಕ್ಷಗಳ ಕಾರ್ಯಕ್ರಮಗಳು, ಭೂಮಿ-ವಸತಿಹೀನರ ಸಮಸ್ಯೆಗಳು, ಭ್ರಷ್ಟಾಚಾರ ವಿರೋಧ, ಅಂತರಜಾತಿ ವಿವಾಹ – ದೊರೆಸ್ವಾಮಿಯವರು ಇವೆಲ್ಲಕ್ಕೂ ಸಲ್ಲುತ್ತಾರೆ. ಜನತೆಯ ಮಿತ್ರ, ಜನತೆಯ ಮಾರ್ಗದರ್ಶಕ, ಜನತೆಯ ಹಿತಾಕಾಂಕ್ಷಿ ಹಾಗೂ ನಿರಂತರ ಸತ್ಯಾಗ್ರಹಿ. ಸ್ವಾತಂತ್ರ್ಯ ಹೋರಾಟಕ್ಕಿಂತ ಹೆಚ್ಚು ದೀರ್ಘವಾದ ಸಮಯ ಅವರು ಜನತೆಯ ಸ್ವಾತಂತ್ರ್ಯ ಹೋರಾಟದಲ್ಲಿ ಕಳೆದರು. ಬ್ರಿಟಿಷರಿಂದ ಭಾರತದ ಪ್ರಭುತ್ವಕ್ಕೆ ಸ್ವಾತಂತ್ರ್ಯ ಬಂತು ಆದರೆ ಭಾರತೀಯ ಪ್ರಭುತ್ವದಿಂದ ಜನತೆಗೆ ಸ್ವಾತಂತ್ರ್ಯ ಪೂರ್ಣವಾಗಿ ಬಂದಿಲ್ಲ ಎಂಬುದನ್ನು ಅವರು ಅರಿಯಬಲ್ಲವರಾಗಿದ್ದರು.

ನಮ್ಮ ತಲೆಮಾರಿನ ಈ ದಶಕದಲ್ಲೇ ನಿಜವಾದ ಗಾಂಧಿ ಆದರ್ಶಗಳ ಮಾದರಿಯಂತಿದ್ದರು ಎಚ್.ಎಸ್ ದೊರೆಸ್ವಾಮಿ. ಗಾಂಧಿ ಇದ್ದಿದ್ದರೆ ಈಗ ಹೀಗೆಯೇ ವರ್ತಿಸುತ್ತಿದ್ದರೇನೋ ಎಂದು ನಾವು ಭಾವಿಸಬಹುದು. ದೊರೆಸ್ವಾಮಿಯವರನ್ನು ಒಂದು ಅರ್ಥದಲ್ಲಿ ಸಮಾಜವಾದಿ ಗಾಂಧಿವಾದಿ ಎಂದೂ ಕೂಡ ಕರೆಯಬಹುದು. ಆದರೆ ಈ ಮಾತು ಅವರನ್ನು ಲೋಹಿಯಾವಾದದ ಗುಂಪಿಗೆ ಸೇರಿಸುವುದಿಲ್ಲ. ಪಕ್ಷ ರಾಜಕಾರಣಕ್ಕೆ ಅವರು ಸೇರಬಯಸಲಿಲ್ಲ. ಪರ್ಯಾಯ ರಾಜಕಾರಣದ ಆಶಯಗಳ ಗುಂಪಿಗೂ ಅವರು ಸೇರಲಿಲ್ಲ. ಆದರೆ
ಪ್ರಜಾಪ್ರಭುತ್ವವನ್ನು ಕಾಪಾಡುವುದಕ್ಕೆ ಬೇಕಾದ ಕ್ರಿಯಾಶೀಲತೆಯನ್ನು ಸದಾ ಕಾಪಾಡಿಕೊಂಡಿದ್ದರು. ಜನಪರವಾದ ಕಾಳಜಿ ಎಂದು ಖಾತ್ರಿಯಾದರೆ ಸಿದ್ಧಾಂತಗಳ ‘ಮಡಿ-ಮೈಲಿಗೆ’ ಇಲ್ಲದೆ ಅವರು ಹೋರಾಟದ ಸಹಯೋಗಕ್ಕಿಳಿಯುತ್ತಿದ್ದರು. ಕಾರ್ಯಕ್ರಮ ಅಹಿಂಸಾತ್ಮಕವಾಗಿರಬೇಕೆಂಬುದೊಂದೇ ಪೂರ್ವ ಷರತ್ತು.

ಅಣ್ಣಾ ಹಜಾರೆಯವರದು ನಾನೀಗಾಗಲೇ ವಿವರಿಸಿದ ಎಚ್.ಎಸ್ ದೊರೆಸ್ವಾಮಿಯವರ ರೀತಿನೀತಿಗಳಿಗೆ ತುಂಬಾ ಭಿನ್ನ. ಗಾಂಧಿವಾದಿ ಉಡುಪು ಧರಿಸಬಹುದು, ಸರ್ವಾಧಿಕಾರಿ ವರ್ತನೆ ತೋರಿಸುತ್ತಾರೆ. ಅವರ ಜೊತೆ ಸಹಜವಾಗಿ, ಸರಳವಾಗಿ ಯಾರೂ ವ್ಯವಹರಿಸಲು ಸಾಧ್ಯವಿಲ್ಲ. ‘ಭಯ-ಭಕ್ತಿ’ಯ ವಾತಾವರಣ ನೆಲೆಗೊಂಡಿರುತ್ತದೆ. ದೊಡ್ಡ ಸಾಂಸ್ಥಿಕ ರಚನೆಯಲ್ಲಿ ಸುಧಾರಣಾ ಕಾರ್ಯದಲ್ಲಿ ತೊಡಗಿರುವ ಕಾರ್ಯಕರ್ತರ ಪಡೆ ಅವರಿಗಿದೆ. ಅದಕ್ಕೆ ಅಣ್ಣಾ ಹಜಾರೆ ಅಪ್ರಶ್ನಿತ ನಾಯಕ. ಕಾರ್ಯಕರ್ತರು ‘ಭಕ್ತಗಣ’ದ ಗುಣ ತೋರಿದರೆ ಮಾತ್ರ ಅವರೊಂದಿಗಿರುವ ಅರ್ಹತೆ ಪಡೆದುಕೊಳ್ಳುತ್ತಾರೆ. ನಾಯಕನಿಗೂ ಕಾರ್ಯಕರ್ತರಿಗೂ ಸಂವಾದ, ಚರ್ಚೆ, ಟೀಕೆ ಇಲ್ಲವೇಇಲ್ಲ. ಏನಿದ್ದರೂ ಸಂದೇಶ, ಆದೇಶ, ಹುಕುಂಗಳ ಸರಬರಾಜು ನಡೆಯುತ್ತದೆ. ಬಹಳ ನಾಜೂಕಾಗಿ ಪರದೆ ಮುಚ್ಚಿದ ಒಂದು ಅರೆಊಳಿಗಮಾನ್ಯ ಯಜಮಾನಿಕೆ.

ಅಣ್ಣಾ ಹಜಾರೆಯ ಪ್ರತಿ ನಡೆಯೂ ರಾಜಕೀಯಮಯ. ಬಲಪಂಥೀಯ ಕೋಮುವಾದಿಗಳೊಂದಿಗೆ ಗುಟ್ಟಾದ ಪ್ರೇಮ ವ್ಯವಹಾರ. ಎಲ್ಲರಿಗೂ ಆದೇಶ ಕೊಡುವ ಅಣ್ಣಾ ಹಜಾರೆ, ಸಂಸತ್ತೂ ಕೂಡ ತನ್ನ ಆದೇಶ
ಪಾಲಿಸಬೇಕು ಎಂದು ಬಯಸುತ್ತಾರೆ. ಪ್ರಜಾಪ್ರಭುತ್ವದ ಬಗ್ಗೆ ತಿಳಿವಳಿಕೆಯೂ ಇಲ್ಲ, ಗೌರವವೂ ಇಲ್ಲ. ತಾನು ಬಹಳ ತ್ಯಾಗಿ ಮತ್ತು ಉದಾತ್ತಚರಿತ ಎಂಬ ಸ್ವಯಂ ನಂಬುಗೆ. ಪ್ರಶ್ನಾತೀತ, ಟೀಕಾತೀತ ಆಗಿರುವುದರಲ್ಲಿ ಆನಂದ. ಗ್ರಾಮೋದ್ಧಾರದ ಮಾತಿದೆ ಆದರೆ ಜಾಗತೀಕರಣದ ವಿರುದ್ಧ ನಿಲುವಿಲ್ಲ. ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಲೋಕಪಾಲ್ ಮಸೂದೆ ಬೇಕು ಎಂದು ನಡೆಸಿದ ಹೋರಾಟವೇ ಒಂದು ಒಳಸಂಚು. ಸಂಘಪರಿವಾರಕ್ಕೆ ಇನ್ನಿಲ್ಲದ ರಾಜಕೀಯ ನೆಲೆ ಒದಗಿದ್ದು, ಕಾಂಗ್ರೆಸ್ ಖಳನಾಯಕನಂತೆ ಕಂಡಿದ್ದು ಅಣ್ಣಾ ಹಜಾರೆಯ ಈ ಕಪಟ ದೇಶಪ್ರೇಮಿ ಹೋರಾಟದಿಂದ. ರಾಷ್ಟ್ರಭಕ್ತಿಯೆಂದು ಅದು ಹಿಂದೂಕೋಮುವಾದಿ ಭಕ್ತಿಯ ಬಣ್ಣ ಬಳಿದುಕೊಂಡರೂ ವಿರೋಧಿಸದ ಆಷಾಡಭೂತಿತನ.

ರೈತರ ಪರ, ಗ್ರಾಮದ ಪರ ಎಂದು ಹೇಳುವ ಅಣ್ಣಾ ಹಜಾರೆ ಕಳೆದ ಆರು ತಿಂಗಳಿಂದ ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ರೈತ ಆಂದೋಲನದ ಬಗ್ಗೆ ಚಕಾರವೆತ್ತಿಲ್ಲ. ಬೆಂಬಲ ಸೂಚಿಸಿಲ್ಲ. ಗ್ರಾಮಸ್ವರಾಜ್ಯದ ಮಾತಾಡುವ ಅಣ್ಣಾ ಹಜಾರೆಗೆ ಕೃಷಿ ಮಾರಾಟ ವ್ಯವಸ್ಥೆ ಖಾಸಗಿ ಕಂಪನಿಗಳ ಪಾಲಾಗುವುದರ ಬಗ್ಗೆ ವಿರೋಧವಿಲ್ಲ. ಸತ್ಯಾಗ್ರಹ ಶುರುಮಾಡುತ್ತೇನೆ ಎಂದು ಹೇಳಿಕೆ ನೀಡಿ ಒಳಗಿಂದೊಳಗೇ ಸಂಧಾನ ಮಾಡಿಕೊಂಡು ತಟಸ್ಥರಾಗಿ ಉಳಿಯುವ ಹಜಾರೆಯ ವರ್ತನೆ ನೋಡಿದರೆ ಸಾಕು ಆತ ಎಷ್ಟು ’ನಿಷ್ಕಳಂಕ’ ಎಂಬುದು ಹೊಳೆದುಹೋಗುತ್ತದೆ. ಸಂಘಪರಿವಾರ ಮತ್ತು ಬಿಜೆಪಿ ವಾಸ್ತವವಾಗಿ ಅಣ್ಣಾ ಹಜಾರೆಯ ಸೂತ್ರಧಾರಿಗಳು. ಅವರು ಬಯಸಿದಂತೆ ಕುಣಿಯುವ ಪಾತ್ರಧಾರಿ ಎಂದು ಗೊತ್ತಿರುವುದರಿಂದಲೇ ಗೋದಿಮೀಡಿಯಾ ಅಣ್ಣಾ ಹಜಾರೆಯನ್ನು ರಾಷ್ಟ್ರಮಟ್ಟದ ವ್ಯಕ್ತಿತ್ವವನ್ನಾಗಿ ಬಿಂಬಿಸುತ್ತದೆ. ಆತನಿಗೆ ಆತನ ರಾಜ್ಯದ ಹೊರತಾಗಿ ಬೇರೆ ಯಾವ ರಾಜ್ಯದಲ್ಲೂ ಹಿಂಬಾಲಕರಿಲ್ಲ. ಆದರೂ ಆತ ರಾಷ್ಟ್ರಮಟ್ಟ. ಆ ರಾಷ್ಟ್ರಮಟ್ಟವನ್ನು ಗುಟ್ಟಾಗಿ ಸಂಘಪರಿವಾರ ದಯಪಾಲಿಸುತ್ತದೆ. ಹಜಾರೆ ಬಾಲವಾಡಿಸುತ್ತಾರೆ. ಬಿಜೆಪಿಯೊಳಗಿನ ಭ್ರಷ್ಟಾಚಾರದ ಬಗ್ಗೆ ಸೊಲ್ಲೆತ್ತಬೇಕೆಂದು ಆತನಿಗೆ ಆತ್ಮಸಾಕ್ಷಿ ಎಚ್ಚರಿಸುವುದೇ ಇಲ್ಲ. ಆತ್ಮಭ್ರಷ್ಟವಾದ ಮೇಲೆ ಗಾಂಧಿವಾದಿಯಾಗಿ ಉಳಿಯುವುದು ಕಷ್ಟ.

ದೊರೆಸ್ವಾಮಿಯವರು ನಡೆದು ಹೋಗಿದ್ದಾರೆ. ಒಂದು ಆದರ್ಶ ಮಾದರಿಯನ್ನುಳಿಸಿದ್ದಾರೆ. ಗಾಂಧಿವಾದದವರಿಂದ ಹಿಡಿದು ತೀವ್ರಗಾಮಿ ಎಡಪಂಥೀಯರವರೆಗೂ ಗೌರವ ಕೃತಜ್ಞತೆ ಸಂಪಾದಿಸಿದ್ದಾರೆ. ಸಾಯುವವರೆಗೂ ಗಾಂಧಿವಾದಿಯಾಗಿಯೇ ಎಲ್ಲಾ ಅರ್ಥದಲ್ಲಿ ಬಾಳಿದ್ದಾರೆ. ಗಾಂಧಿಯವರಿಗಿದ್ದ ಕೆಲವು ಗೊಂದಲಗಳು ಕೂಡ ದೊರೆಸ್ವಾಮಿಯವರಿಗಿರಲಿಲ್ಲ ಎಂದು ನನಗೆ ಅನಿಸುತ್ತದೆ. ಅವರನ್ನು ಅಧ್ಯಕ್ಷರನ್ನಾಗಿ ಮಾಡಿ ನಾನು ಸಂಚಾಲಕನಾಗಿ ಸಾಮ್ರಾಜ್ಯಶಾಹಿ ವಿರೋಧಿ ಒಕ್ಕೂಟವನ್ನು ರಚಿಸಿದ್ದೆವು. ಆಗ ನಾನು ಅವರ ಜೊತೆ ನಿಕಟವಾಗಿ ಓಡಾಡುವ ಅವಕಾಶ ಪಡೆದಿದ್ದೆ. ಅವರು ನಮ್ಮ ಹೋರಾಟದ ಅಚಂಚಲ ಮಿತ್ರರಾಗಿದ್ದರು. ಯಾವಾಗ ಭೇಟಿಯಾದರೂ ‘ನೀನಿರುವ ಹಾರೋಹಳ್ಳಿಯೇ ನನ್ನ ಹುಟ್ಟಿದ ಊರು ಕಣಯ್ಯ, ನಿಮ್ಮ ಶ್ರೀಮತಿಯವರು ಹೇಗಿದ್ದಾರೆ’ ಎಂದು ಕೇಳದೆ ಮಾತು ಮುಗಿಸುತ್ತಿರಲಿಲ್ಲ. ಅಂತಹವರು ಒಂದು ಉಜ್ವಲ ಸತ್ಯಾಗ್ರಹದ ಅಧ್ಯಾಯವನ್ನು ನಿರ್ಮಿಸಿ ಸಾಗಿದ್ದಾರೆ. ನಿರಂತರ ಸತ್ಯಾಗ್ರಹಿಯಾಗಿಯೇ ತಮ್ಮ ಜೀವನ ಮುಗಿಸಿದ್ದಾರೆ. ಅವರಿಗೆ ಮೆಚ್ಚುಗೆ ಹಾಗೂ ಕೃತಜ್ಞತೆಯ ಕಣ್ಣೀರು- ಹೀಗೂ ಬಾಳಬಹುದೇ ಎಂಬ ಅಚ್ಚರಿ ಮತ್ತು ಗೌರವವನ್ನು ನನ್ನಲ್ಲಿ ಮೂಡಿಸಿದ್ದಕ್ಕೆ.