ಪ್ರೊ. ಹಿ.ಶಿ. ರಾಮಚಂದ್ರೇಗೌಡ
ನನ್ನ ಮನಸ್ಸಿನಿಂದ ಹೊರಗೆ ಹೇಗೆ ಬಿಡಲಿ-ಬಂಜಗೆರೆಯನ್ನು, ನನ್ನನ್ನು ಖಾಲಿ ಮಾಡಿಕೊಂಡಂತಾಗುತ್ತದಲ್ಲ. ಈ ಮನೋ ಪ್ರಕ್ರಿಯೆಯನ್ನು ಯಾರು ಇಷ್ಟಪಡುತ್ತಾರೆ. ಆತ್ಮವನ್ನು ದೇಹದಿಂದ, ದೇಹವನ್ನು ಆತ್ಮದಿಂದ ಬೇರೆ ಮಾಡಲಾಗುವುದೆ? ಅನೇಕ ಜನಗಳನ್ನು ಎತ್ತಬೇಕೆಂಬ ಫಲಾನುಭವಿಗಳು ಆತ್ಮವನ್ನು ಬೇರೆ ಬೇರೆ ಕಾಲ-ದೇಶ- ದೇಹಗಳಿಗೆ ರವಾನಿಸುತ್ತಿರುತ್ತಾರೆ. ನಾವು ಒಂದು ದೇಹದ ಆತ್ಮ, ಅಂಗ ಅಖಂಡ ಅನ್ನುವವರು. ಈ ದೇಹದ್ದು ಈ ಆತ್ಮ, ಬೇರೆ ದೇಹದ್ದು ಬೇರೆ ಆತ್ಮ ಹಾಗೆ: ನನ್ನ ಚಿಂತನಾ ದೇಹ-ಆತ್ಮದ ಅವಿಭಾಜ್ಯ ಸ್ವರೂಪ ಜೆ.ಪಿ.
ಗುಣವಾಚಕಗಳಲ್ಲಿ ಕೂಡಿಹಾಕಲೆ ಬಂಜಗೆರೆಯನ್ನು, ಸುತರಾಂ ಇಷ್ಟವಿಲ್ಲ. ಈ ಶಿಷ್ಟ ದೇಶ ಸೃಷ್ಟಿಸಿದ ಭ್ರಷ್ಟ ಭಟ್ಟಂಗಿ ಸಂಸ್ಕೃತಿ ನಮ್ಮ ಗುಣವಾಚಕಗಳ ಶಕ್ತಿ, ಅರ್ಥ ಮತ್ತು ಸೃಷ್ಟಿ ಪ್ರಕ್ರಿಯೆಯನ್ನೆ ನಾಶ ಮಾಡಿಬಿಟ್ಟಿವೆ. ಆ ಹೆವಿವೆಲ್ಸ್ ರಾಜ ಲೈಟ್‌ವೆಸ್ಟ್ ಪುರೋಹಿತಶಾಹಿ ಗುಣವಾಚಕಗಳ ಕಡೆಗೆ ತಿರುಗಿ ನೋಡದಂತೆ ಮಾಡಿಬಿಟ್ಟಿದ್ದಾರೆ. ಇದರೊಳಗೆ ಜಯಪ್ರಕಾಶ್‌ನ ತಂದು ನನ್ನನ್ನು ಅವಮಾನಗೊಳಿಸಿಕೊಳ್ಳಲಾರೆ.
ಇಷ್ಟದ ಮಾತುಗಳನ್ನು ಆಡಲೆ ಊಹೂಂ. ಆಗದಾಗದು. ಇಷ್ಟ ಅನಿಷ್ಟ ಅನ್ನುವುದೇ ಸ್ವಾರ್ಥ ಮನೋಭಾವದಿಂದ ಹುಟ್ಟಿದ ಅಪೇಕ್ಷಾರ್ಥಿ ದೃಷ್ಟಿ, ಈಗ ಬೇರೆ ಅವರು ಒಂದು ಸಣ್ಣ ಅಧಿಕಾರದಲ್ಲಿ ಇದ್ದಾರೆ. ಅದಕ್ಕೆ ಸಚಿವ ಸ್ಥಾನಮಾನ ನೀಡಲಾಗುತ್ತದೆ ಎಂಬ ಸುದ್ದಿಯನ್ನು ಬೇರೆ ಪತ್ರಿಕೆಯಲ್ಲಿ ಓದಿದೆ. ಹಾಗಿರುವಾಗ ಅವರಿಗೆಂದೆ ನಾನು ತಿಳಿದ ಇಷ್ಟದ ಮಾತುಗಳನ್ನು ಆಡಿದರೆ ಈ ಲೇಖನ ಓದುವ ಮಂದಿ ಏನೆಂದುಕೊಂಡಾರು, ಇದು ಅಭಿನಂದನಾ ಸಮಾರಂಭದ ವಾಸನೆ ಎನ್ನುವುದಿಲ್ಲವೆ?
ಲೆಫ್ಟ್-ರೈಟ್, ಲೆಫ್ಟ್-ರೈಟ್ – ಈಗ ಈ ಎರಡೆ ಪದ ಸೈನ್ಯದಲ್ಲೂ.
ಸೈದ್ಧಾಂತಿಕತೆಯನ್ನೂ ಉರುಹೊಡೆದ ವ್ಯಾಯಾಮಗಳು ತಾನೆ? ಜೆ.ಪಿಯನ್ನು ಲೆಫ್ಟ್ಗೆ ಹಾಕಿಕೊಂಡು ವಾದ ಹೊಡೆಯಲೆ, ಜೆ.ಪಿ ಆ ವಾದವನ್ನು ಗೆದ್ದು ಜನಗಳ ಮಧ್ಯೆ ಮರುಹುಟ್ಟು ಪಡೆದ ಚೈತನ್ಯ, ಯಾವುದೇ ವಾದಕ್ಕೆ ಕಟ್ಟಿ ಹಾಕಿದರೂ ಆ ವಾದವೆ ಕಟ್ಟು ಬಿಚ್ಚಿಕೊಂಡು ಜೆ.ಪಿ.ಗೆ ಶರಣಾಗುತ್ತವೆ. ಯಾಕೆಂದರೆ ಜೆ.ಪಿ ವಾದದ ಒಳಗೂ ಇಲ್ಲ, ಹೊರಗೂ ಇಲ್ಲ. ನಮ್ಮ ವಚನ ಚಿಂತಕ ಅಲ್ಲಮನ ಹಾಗೆ, ಈ ವಾದಗಳೆಂಬುವೆ ತಾತ್ಕಾಲಿಕ ರಾಜಕೀಯ ಆರ್ಥಿಕ ದೃವೀಕರಣಕ್ಕೆ ಕಟ್ಟಿಕೊಂಡ ಅಣೆಕಟ್ಟುಗಳಲ್ಲವೆ. ಅವಕ್ಕೆ ಎಷ್ಟು ತಾನೆ ತುಂಬಿಕೊಳ್ಳಲು ಸಾಧ್ಯ?
ಈ ‘ಏಳು ಮಲ್ಲಿಗೆ ತೂಕದ ರಾಜಕುಮಾರ’ ಸಿಕ್ಕ ನನಗೆ, ಅನೇಕ ವರ್ಷಗಳ ತಪಸ್ಸಿನ ಫಲ ಎನ್ನುವ ಹಾಗೆ, ಒಬ್ಬೊಬ್ಬರು, ಒಂದೊಂದು ಮನಸ್ಸು ಸಿಕ್ಕುವುದು ಅಷ್ಟು ಸುಲಭವಲ್ಲ. ಅದು ನಿಜಕ್ಕೂ ಭುವನದ ಭಾಗ್ಯ ಅನ್ನುತ್ತಾರಲ್ಲ ಹಾಗೆ, ಕಾದರೆ ಅಂಥ ಸೌಭಾಗ್ಯ ಸಾಧುವಂತೆ. ಅದರಲ್ಲಿ ನನಗೆ ನಂಬಿಕೆ ಬಂತು. ಒಬ್ಬೊಬ್ಬರು ಎಷ್ಟು ಬೇಗ ಸಿಗುತ್ತಾರೆ, ಎಷ್ಟು ಬೇಗ ಕಳೆದು ಹೋಗುತ್ತಾರೆ. ಮಾರುಕಟ್ಟೆಯಲ್ಲಿ ಸಿಕ್ಕ ಮಾಲುಗಳ ಹಾಗೆ, ನಾನು ಎಂದೂ ಜೆ.ಪಿಯನ್ನು ಕಳೆದುಕೊಂಡಿಲ್ಲ. ಹಾಗೆ ಕಳೆದುಕೊಂಡು ಬರಿದಾಗಲಾರೆ, ಬರಿದಾಗುವುದು ಎಂದರೆ ಸಾವು.
ದಾಖಲಿಸುವ ಹಾಗೆ ಜೆ.ಪಿ. ಬಗ್ಗೆ ಬರೆಯಲೆ. ದಾಖಲಿಸಲು ಹೋಗಿ ರತ್ನಾಕರವರ್ಣಿಯ ಭರತ ಗರ್ವಭಂಗಿಯಾದ, ನೋಡಲು ನನ್ನಲ್ಲಿ ಗರ್ವರಸವಿಲ್ಲ. ನಾನು ಜನಪದ, ಯಾವುದನ್ನೂ ಯಾರನ್ನೂ ದಾಖಲೆ ಮಾಡಿ ಕಳೆದುಕೊಳ್ಳಲು ಇಷ್ಟುಪಡಲಾರೆ. ದಾಖಲೆ ಎಂದರೆ ಆ ದಾಖಲಿತ ಅಂಶದ ನಿಷ್ಕ್ರಿಯೀಕರಣ ಎಂದು ಅರ್ಥ. ಅದು ಅನೇಕ ಅರ್ಥ ಮತ್ತು ಕ್ರಿಯೆಗಳನ್ನು ಕಳೆದುಕೊಂಡು ಒಂದೇ ಅರ್ಥ ಮತ್ತು ಒಂದೇ ಕ್ರಿಯೆಯಲ್ಲಿ ಉಳಿದ ಹಾಗೆ ಪಠ್ಯವಾಗಿಸುವ ಹಟ, ಯಾವ ಬಡ್ಡಿ ಪದ ಪಠ್ಯ ಸ್ಥಿರ, ಶ್ರೇಷ್ಠ ಎಂದನೊ ಗೊತ್ತಿಲ್ಲ. ಅದೆಲ್ಲ ಅಲ್ಲದ ಮಾತುಗಳು, ಸಾಧಕರು ತಮ್ಮನ್ನು ಸ್ಥಾಪಿಸಿಕೊಳ್ಳುವ ಹುನ್ನಾರ. ಮಾರುಕಟ್ಟೆಯಾಗಬೇಕಲ್ಲ!
ಅದು ಮನುಷ್ಯನನ್ನಂತೂ ಸಾಯಿಸಿ ಬಿಡುತ್ತವೆ. ಮನುಷ್ಯ ಪ್ರಕ್ರಿಯೆಯಲ್ಲಿ ಇರುತ್ತಾನೆ. ಯಾರೇ ಪ್ರತಿಭಾವಂತನನ್ನು ಮುಗಿಸಿ ಬಿಡಬೇಕೆಂದಾದಲ್ಲಿ ಭದ್ರವಾಗಿ ದಾಖಲೆ- ಪಠ್ಯದಲ್ಲಿ ಬಂಧಿಸಿದರೆ ಸಾಕು. ಅದರ ಹೊರಗೆ ಜನ ಅವನನ್ನು ನೋಡುವುದೂ ಇಲ್ಲ, ಅವನ್ನು ಓದುವುದೂ ಇಲ್ಲ. ಅವನನ್ನು ಮುಂದುವರಿಸುವುದೂ ಇಲ್ಲ. ನನ್ನ ಜೆ.ಪಿಯನ್ನು ಬಂಧಿಸಲಾರೆ, ಜೆ.ಪಿ, ಕರ್ನಾಟಕ ಚೈತನ್ಯ, ಸಕ್ರಿಯ ಸಾಂಘಿಕ ಶಕ್ತಿ, ಹೋರಾಟ ಕರ್ನಾಟಕದ ಸಕ್ರಿಯತೆಯ ಸಾವಯವ ಪ್ರಕ್ರಿಯೆ, ಅವರೊಡನೆ ಕರ್ನಾಟಕ ಚಲಿಸುತ್ತದೆ.
ನಾನು ಕಷ್ಟಪಟ್ಟು ಎಂ.ಎ ಓದಿ, ಹಾಮಾನಾ ಮತ್ತು ಜೀಶಂಪ ಅವರ ಪ್ರೀತಿಯಿಂದ ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಮೇಸ್ಟಾದೆನಲ್ಲ. ನನಗೆ ಪಾಠ ಮಾಡುವುದು ಸಾಕಾಗುತ್ತಿರಲಿಲ್ಲ. ಕುವೆಂಪು ನನ್ನ ತಲೆಗೆ ಹುಳ ಬಿಟ್ಟಿದ್ದರಲ್ಲ.
ಬಸವಣ್ಣ ಬಂಧುವಾಗಿದ್ದರಲ್ಲ. ಬುದ್ಧ, ಲೋಹಿಯಾ, ಅಂಬೇಡ್ಕರ್ ನನ್ನ ಮೇಲೆ ದಾಳಿ ನಡೆಸಿದ್ದರಲ್ಲ. ನಾನೂ ಯಾರಾದರೊಬ್ಬರ ಮೇಲೆ ದಾಳಿ ನಡೆಸಲೇಬೇಕಲ್ಲ. ಜಾತಿಯ ಮೇಲೆ ನಮ್ಮ ಯುದ್ಧ, ಸಮಾನತೆಗಾಗಿ ನಮ್ಮ ಬದ್ಧತೆ. ನಾನು ದಲಿತ, ಹಿಂದುಳಿದ ಹಾಗೂ ಗ್ರಾಮಾಂತರ ವಿದ್ಯಾರ್ಥಿಗಳ ಸೈನ್ಯವನ್ನು ಕಟ್ಟಿಕೊಂಡು ಆಡ್ಡಾಡುತ್ತಿದ್ದೆ, ದಾಳಿಯನ್ನೂ ಮಾಡುತ್ತಿದ್ದೆ. ಆಗದವರಿಗೆ ನಾನು ಗೂಂಡಾ ಮೇಷ್ಟರು, ಆಗುವವರಿಗೆ ಸಾಂಸ್ಕೃತಿಕ ನಾಯಕ. ಆಗಿನ್ನೂ ದಸಂಸ, ಕರಾರೈಸಂ ಇರಲಿಲ್ಲ. ಸಮಾಜವಾದಿಗಳು ಮಾತ್ರ ಭರಾಟೆಯಲ್ಲಿದ್ದರು. ನಮ್ಮ ಹುಡುಗರು ವೈಚಾರಿಕ ಪುಂಡುತನಕ್ಕೆ ಹೆಸರಾಗಿದ್ದರು. ಬ್ರಾಹ್ಮಣ ವಿರೋಧ, ಶೂದ್ರ ಸಮರ್ಥನೆಯ ಒಂದು ಆರಂಭಿಕ ಸಭೆ ಅದು. ಒಂದು ರೀತಿಯ ರೈತ ತಳವರ್ಗಗಳ ಅಭಿವೃದ್ಧಿ ಮಂತ್ರ ಕೂಡ. ಮೈಸೂರಿನ ಸುತ್ತ ಮುತ್ತ ಯಾವ ಬಗೆಯ ತಾರತಮ್ಯ, ಹಿಂಸೆ ಆದರೂ ಸರಿ, ನಾವು ಅಲ್ಲಿರುತ್ತಿದ್ದವು.
ಆಗ ನೋಡಿ ನನಗೊಬ್ಬ ಏಳು ಮಲ್ಲಿಗೆ ತೂಕದ ರಾಜಕುಮಾರ ಸಿಕ್ಕಿದ. ಈ ನಾನೆಂಬ ಕಿನ್ನರಿಜೋಗಿಗೆ ನಾವೆಂಬ ಜನನಾಯಕ ಮಿತ್ರ ಸಿಕ್ಕಿದ. ಸಿಕ್ಕಿದ, ಸಿಕ್ಕೇ ಸಿಕ್ಕಿದ; ನನಗೆ ಆಗ ಸಂಭ್ರಮ. ಮನಸ್ಸು ಥಕಥಕ ಕುಣಿಯಿತು; ನಮ್ಮ ವಿದ್ಯಾರ್ಥಿ ನಾಯಕರುಗಳ ಮಧ್ಯೆ ಮಿಂಚಿದ ನಕ್ಷತ್ರದಂತೆ. ಆಂಜನೇಯನ ಎದುರು ಅನೇಕ ಸಂಸ್ಕಾರಗಳ ರಾಮಪ್ರತ್ಯಕ್ಷನಾದಂತೆ ಆ ವಯಸ್ಸಿಗೆ ಅದೆಂಥ ಪ್ರಬುದ್ಧತೆ, ಅಸಾಧಾರಣ ತಾಳ್ಮೆ – ವಿವೇಚನೆ – ವಿವೇಕ. ನಾನು ವಿಸ್ಮಿತನಾದೆ. ಅದೂ ಯಾದವ ಸಮುದಾಯದಿಂದ ಕಾಣಿಸಿಕೊಳ್ಳಲು ಆಗ ಸಾಧ್ಯವೇ ಇಲ್ಲದಿರುವ ಸಮುದಾಯದೊಳಗಿಂದ, ನಾನು ಪುಳಕಿತನಾದೆ. ಬಹುಸಂಖ್ಯಾತ ದರ್ಪದ ಆಡಳಿತ ಜನ ವರ್ಗಗಳ ಮಧ್ಯೆ ಸದಾ ವಿವೇಕ ಮೂರ್ತಿವೆತ್ತಂತೆ, ಎಲ್ಲ ಸಿದ್ಧಾಂತಗಳನ್ನು ಮೀರಿ ಬೆಳೆದುನಿಂತ ಯೂನಿವರ್ಸಲ್ ವೇದಾಂತಿಯಂತೆ ಮಾಗಿದ ವ್ಯಕ್ತಿತ್ವ ಧ್ಯಾನಸ್ಥ ಹೋರಾಟಗಾರ.
ಅಲ್ಲಿಂದ ಇಲ್ಲಿಯವರೆಗೆ ನೂರು ಸಂದರ್ಭಗಳು. ಜೆ.ಪಿ ತನ್ನ ಜನಪರ ತಾತ್ವಿಕತೆಯಿಂದ ದೂರ ಸರಿಯಲಿಲ್ಲ. ತಣ್ಣನೆಯ ಹೋರಾಟದಿಂದ ವಿಮುಖರಾಗಲಿಲ್ಲ. ಕರ್ನಾಟಕದ ದೊಡ್ಡ ಸಮೂಹ ಎದರು ಬಿದ್ದರೂ ಜಗ್ಗಲಿಲ್ಲ. ನಿಜವಾದ ಜಗದ್ಗುರುವಿನ ಥರ ಹೇಳುವುದನ್ನು ಧೀರವಾಗಿಯೇ ಹೇಳಿದರು. ಬಸವಣ್ಣನನ್ನು ಮರು ಹುಟ್ಟಿಸಿದಾಗಲಂತೂ ನಾನು ಪುಳಕಿತನಾಗಿ ಹೋದೆ. ಹುಟ್ಟಿನ ಶ್ರೇಷ್ಠತೆ, ಜಾತಿಯ ಶ್ರೇಷ್ಠತೆಯನ್ನು ಕೂಲ್ ಆಗಿ ಛಿದ್ರ ಮಾಡುವ ಪ್ರಯತ್ನ ಮಾಡಿದರಲ್ಲ. ಅದು ಭಾರತ ಮರುಹುಟ್ಟುವಂತೆ ಮಾಡುವ ಸಾಹಸ!
ಮತ್ತೂ ಏನು ಹೇಳುವುದು? ಜೆ.ಪಿ ಕರ್ನಾಟಕದ ಆಸ್ತಿ, ಶಕ್ತಿ ಮತ್ತು ಕ್ರಿಯೆ. ತೂಗುವ ವ್ಯಕ್ತಿತ್ವ ಅವರೊಂದಿಗೆ ನಾನಿರುವುದು ಮರುಹುಟ್ಟು ಪಡೆದಂತೆ. ಅವರಿಗೆ ಆರೋಗ್ಯ ಆಯಸ್ಸು ಮತ್ತು ಶ್ರೇಯಸ್ಸನ್ನು ಹಾರೈಸುತ್ತಾ…