ಅಲೆಕ್ಸ್ ಹೆಲಿ ಬರೆದ ’ರೂಟ್ಸ್’ ಕಾದಂಬರಿಯ ಕನ್ನಡ ಅನುವಾದ ’ತಲೆಮಾರು’. ಪ್ರಸಿದ್ಧ ಸಾಹಿತಿ, ಅನುವಾದಕ ಬಂಜಗೆರೆ ಜಯಪ್ರಕಾಶ್ ಕೃತಿಯನ್ನು ಕನ್ನಡಕ್ಕೆ ತಂದಿದ್ದಾರೆ. ಅಲೆಕ್ಸ್ ಹೆಲಿ 1976ರಲ್ಲಿ ಪ್ರಕಟಿಸಿದ ಕೃತಿ ನೆಲೆ ಕಳೆದುಕೊಂಡ ಕಪ್ಪುವರ್ಣೀಯ ಕುಟುಂಬವೊಂದರ ಭಾವನಾತ್ಮಕ ಚಿತ್ರಣ ಎನ್ನುವುದು ಕೇವಲ ಮಿತಿಯಾದೀತು. ಅದರಾಚೆಗೆ ಇದು ಜಗತ್ತಿನ ಎಲ್ಲ ಶೋಷಿತರ ಪ್ರತಿನಿಧಿಯಂತೆ ತೋರುತ್ತದೆ.
ಕೃತಿಯ ಬಗ್ಗೆ ಬಂಜಗೆರೆ ಹೇಳುವುದು ಹೀಗೆ: ಅಮೆರಿಕದಲ್ಲಿ ಓದಲು ಬಲ್ಲ ಪ್ರತಿಯೊಬ್ಬ ಕಪ್ಪುವರ್ಣೀಯನೂ ಈ ಪುಸ್ತಕವನ್ನು ಕೊಂಡಿದ್ದಾನೆ, ಓದು ಬರದಿರುವ ಕಪ್ಪುವರ್ಣೀಯನೂ ಇದನ್ನು ಕೊಂಡು ‘ಬೈಬಲ್’ನ ಹಾಗೆ ಭದ್ರವಾಗಿ ಇರಿಸಿಕೊಂಡಿದ್ದಾನೆ’ ಎಂದಿದ್ದಾರೆ.
ಮುಂದುವರಿದು ’ಕನ್ನಡದಲ್ಲಿ ಕಪ್ಪುವರ್ಣೀಯರು ಬರೆದಿರುವ ಸಾಹಿತ್ಯ ಬಹಳ ಕಡಿಮೆ ಬಂದಿದೆ. ಅದರಲ್ಲೂ ’ರೂಟ್’ನಂತಹ ಕಾದಂಬರಿ ನಮ್ಮ ಸಾಂಸ್ಕೃತಿಕ ಸಂದರ್ಭಕ್ಕೆ ಬಹಳ ಅರ್ಥಪೂರ್ಣ ಬೆಳಕನ್ನು ಚೆಲ್ಲಬಲ್ಲದೆಂದು ನನ್ನ ಅನಿಸಿಕೆ, ಇಲ್ಲಿ ಗುಲಾಮಿ ಪದ್ಧತಿ ಇಲ್ಲದಿರಬಹುದು, ಆದರೆ ಜಾತಿ ಪದ್ದತಿ ಗುಲಾಮಗಿರಿಯಂತಹುದೇ ಪರೋಕ್ಷ ಪರಿಸ್ಥಿತಿಯೊಂದನ್ನು ಇಲ್ಲಿನ ಮೂಲ ನಿವಾಸಿ ಕಪ್ಪು ಜನರ ಮೇಲೆ ಸಾವಿರಾರು ವರ್ಷಗಳಿಂದ ಹೇಳಿದೆ. ಅಮೆರಿಕಾದ ಸಂಪತ್ತು ಸಮೃದ್ಧಿಯನ್ನು ಸೃಷ್ಟಿಸಿದ ಕಪ್ಪು ವರ್ಣಿಯನನ್ನು ಅಮಾನುಷವಾಗಿ ನಡೆಸಿಕೊಂಡ ಬಿಳಿಯರ ಗುಲಾಮ ಒಡೆಯರಿಗೂ ಭಾರತೀಯ ಸವರ್ಣೀಯ ಮೇಲ್ಜಾತಿ ಮನಸ್ಸುಗಳಿಗೂ ಅಪಾರ ಸಾಮ್ಯತೆ ಇದೆ’ ಎಂದು ಕೃತಿಯಲ್ಲಿ ಪ್ರಸ್ತಾಪಿಸಿದ್ದಾರೆ.