1. ಸೈದ್ಧಾಂತಿಕ ನಿಲುವು : ಯಾವುದೇ ಸಂಶೋಧನೆ/ ಅಧ್ಯಯನ
ಸಾಮಾನ್ಯವಾಗಿ ಸಂಗತಿ ಅಥವಾ ವಿಷಯವೊಂದರ ಹುಡುಕಾಟವಾಗಿರುತ್ತದೆ. ಅದಕ್ಕಾಗಿ ಹುಡುಕುವುದು, ಸಿಕ್ಕುವ ಮಾಹಿತಿಯನ್ನು ಸಂಗ್ರಹಿಸುವುದು ಮತ್ತು ಹಾಗೆ ಸಿಕ್ಕ ಮಾಹಿತಿಯನ್ನು ಅರ್ಥೈಸುವುದು ಎಂಬ ಸಾಮಾನ್ಯ ಪದ್ಧತಿಯನ್ನು ಎಲ್ಲರೂ ಬಳಸುತ್ತಾರೆ.
ಅಧ್ಯಯನಕಾರನಿಗಿರುವ ಬೌದ್ಧಿಕ ಕುತೂಹಲ ಮತ್ತು ಆಸಕ್ತಿಗಳೇ ಈ ಬಗೆಯ ಹೊಸ ವಿಷಯಗಳ ಹುಡುಕಾಟದ ಮೂಲ. ಕೆಲವು ಸಂದರ್ಭಗಳಲ್ಲಿ ಆಸಕ್ತಿ ಎಂಬುದು ವಿವಿಧ ಬಗೆಯ ಹಿತಾಸಕ್ತಿಯೂ ಆಗಿರಬಹುದು. ಈ ಹಿತಾಸಕ್ತಿ ಎನ್ನುವುದಕ್ಕೆ ಇರುವ ಮುಖಗಳು ನೂರಾರು. ಸಾಮಾಜಿಕ ಸನ್ನಿವೇಶವೊಂದರಲ್ಲಿ ಜೀವಿಸುವ ಅಧ್ಯಯನಕಾರ ನಿರ್ದಿಷ್ಟ ವಿಷಯವೊಂದರ ಬೆನ್ನು ಹತ್ತಿ ಹೊರಡುವುದಕ್ಕೆ ಕೆಲವು ಪ್ರೇರಣೆಗಳು ಇರುತ್ತವೆ. ಆ ಪ್ರೇರಣೆಗಳಿಗೆ ಅನುಸಾರವಾಗಿಯೇ ಕಂಡುಕೊಂಡ ಸಂಗತಿಗಳನ್ನು ಅರ್ಥೈಸುವುದು ಸಂಭವಿಸುತ್ತದೆ.
ತನ್ನ ವ್ಯಕ್ತಿಗತ ಹಿತಾಸಕ್ತಿಗಳನ್ನು ಮೀರಿ, ಒಂದು ಸಂಗತಿಯು ಸೂಚಿಸುತ್ತಿರುವ ಸತ್ಯಗಳನ್ನು ಮಂಡಿಸಬೇಕೆಂದರೆ ಆ ಅಧ್ಯಯನಕಾರನಿಗಿರಬೇಕಾದ ಮನೋಸಿದ್ಧತೆ ಬಹಳ ಮುಖ್ಯ ಈ ಮನೋಸಿದ್ಧತೆಯೆಂಬುದು ಆಲೋಚನಾ ವಿಧಾನ, ಸತ್ಯದ ಬಗೆಗಿನ ಮುಕ್ತ ದೃಷ್ಟಿಕೋನ, ವಿಷಯವೊಂದನ್ನು ಹಲವು ಮಗ್ಗುಲುಗಳಿಂದ ಗಮನಿಸುವ ವ್ಯವಧಾನ ಹಾಗೂ ಕಂಡು ಬಂದ ಸುಳುಹುಗಳನ್ನು ವಿಶ್ಲೇಷಣೆಗೊಳಪಡಿಸುವ ಸಾಮರ್ಥ್ಯ ಮುಂತಾದವುಗಳೆಲ್ಲದರ ಸಾರಾಂಶದಂತಿರುತ್ತದೆ.
ಇದನ್ನು ಸೈದ್ಧಾಂತಿಕ ತಳಹದಿ ಎಂದು ಕೂಡ ಕರೆಯಬಹುದು. ವಾಸ್ತವವಾಗಿ ಅಧ್ಯಯನಕಾರನಿಗಿರಬೇಕಾದ ಸಿದ್ಧಾಂತ’ ಎಂದರೆ ಏನು? ಅದು ಸಮಾಜದೆಡೆಗೆ ಇರುವ ನಿಲುವುಗಳು, ಸಮಾಜದ ಬಗ್ಗೆ ಇರುವ ಅಪೇಕ್ಷೆಗಳು ಮತ್ತು ಸಮಾಜದ ವತಿಯಿಂದ ತನಗಿರುವ ನಿರೀಕ್ಷೆಗಳು ಮಾತ್ರ ಅದನ್ನು ಹೆಸರಿಸಿ ಹೇಳಬೇಕಾದಾಗ ಸ್ಕೂಲವಾಗಿ ಬಲಪಂಥೀಯ-ಎಡಪಂಥೀಯ ಎಂದೋ, ಪ್ರಗತಿಪರ-ಪ್ರತಿಗಾಮಿ ಎಂದೋ ವಿಂಗಡಿಸಬಹುದು. ಅತ್ತ ಬಲಪಂಥೀಯವೂ ಅಲ್ಲದ, ಇತ್ತ ಎಡಪಂಥೀಯವೂ ಅಲ್ಲದ ‘ತಟಸ್ಥ’ ಸಿದ್ಧಾಂತವೊಂದನ್ನು ಹೊಂದಿರುವೆವೆಂದು ಕೆಲವರು ಹೇಳುತ್ತಾರೆ.
ತಟಸ್ಥತೆ’ ಶುದ್ಧ ರೂಪದ್ದಾದರೆ ಅದನ್ನು ಗೊಂದಲ’ ಎಂದು ಕರೆಯಬಹುದು. ಅದು ತೋರಿಕೆಯ ಸ್ವಭಾವದ್ದಾಗಿದ್ದಾಗ ಅದನ್ನು ‘ಅವಕಾಶವಾದ’ ಎಂದು ಕರೆಯಬೇಕಾಗುತ್ತದೆ.
ಅತ್ಯಂತ ಮುಕ್ತ ಮನಃಸ್ಥಿತಿ ಎಂದು ತೋರಿಸಿಕೊಳ್ಳುವ ಹಲವಾರು ನಿಲುವುಗಳು ವಾಸ್ತವವಾಗಿ ಯಾವ ಹಿತಾಸಕ್ತಿಯನ್ನೂ ಬಹಿರಂಗವಾಗಿ ತೋರಿಸಿಕೊಳ್ಳದ ಒಂದು “ಜಾಣತನ’ವೇ ಹೊರತು ಆಂತರ್ಯದಲ್ಲಿ ಒಂದು ಬಣದ ಪರ ಅಥವಾ ವಿರೋಧ ಇರುತ್ತದೆ ಅಥವಾ ಯಾವುದನ್ನೂ ಪಕ್ಕಾ ಬೆಂಬಲಿಸಲಾಗದ ಅಸಮಾಧಾನ ವಾದರೂ ಇರುತ್ತದೆ.
ಅಧ್ಯಯನಕಾರ ತನ್ನ ಸಾಮಾಜಿಕ ನಿಲುವುಗಳ ಬಗ್ಗೆ ಸ್ಪಷ್ಟವಾಗಿ ಆಲೋಚಿಸುವುದು ಬಹಳ ಮುಖ್ಯವಾದ ಸಂಗತಿ. ಆ ಹಂತದಲ್ಲೇ ಆತ ಸಮಾಜದಲ್ಲಿ ಯಾವ ಯಾವ ಬಗೆಯ ವಿರೋಧಾತ್ಮಕ ನೆಲೆಗಳಿವೆ? ಆ ನೆಲೆಗಳಿಗೆ ತಾನು ಯಾವ ಬಗೆಯ ಸಂಬಂಧ ಹೊಂದಿದವನಾಗಿದ್ದೇನೆ? ಮತ್ತು ಅವುಗಳ ಬಗ್ಗೆ ತನ್ನ ಪ್ರಜ್ಞಾಪೂರ್ವಕ ಆಯ್ಕೆ ಏನಾಗಿದೆ? ಎಂಬ ಅಂಶಗಳು ಸ್ಪಷ್ಟಗೊಳ್ಳತೊಡಗುತ್ತವೆ. ಅಧ್ಯಯನಕಾರನ ಸಿದ್ಧತೆ ಈ ವಿಧಾನದಲ್ಲೇ ತನಗೆ ಬೇಕೆನಿಸುವ ಸಿದ್ಧಾಂತವೊಂದನ್ನು ಆರಿಸಿಕೊಳ್ಳಲು ಅಥವಾ ರೂಪಿಸಿಕೊಳ್ಳಲು ನೆರವಾಗುತ್ತದೆ.
ಬಹಳ ಸಲ ನಾವು ತಿಳಿದಿರುವಂತೆ, ಅಧ್ಯಯನಕಾರನಾಗಿ ಈ ಬಗೆಯ ಸಿದ್ಧಾಂತವನ್ನು ತಾನು ಹೊಂದಿದ್ದೇನೆ ಎನ್ನುವವರ ಬಗ್ಗೆ ಟೀಕೆ ವ್ಯಕ್ತಗೊಳ್ಳುವುದಿದೆ. ಆದರೆ ಯಾವುದೇ ಸೈದ್ಧಾಂತಿಕ ತಳಹದಿ ಎನ್ನುವುದು ಒಂದು ಪ್ರಣಾಳಿಕೆಯಂತಾಗಿ, ಅದರ ಅನುಸಾರವಾಗಿಯೇ ವಸ್ತುಸ್ಥಿತಿಯನ್ನು ಅರ್ಥೈಸಲಿಕ್ಕೆ ಪ್ರಯತ್ನ ಮಾಡಿದಾಗ ಅದರಲ್ಲಿ ಲೋಪ ಉಂಟಾಗುವುದು ಸಹಜ. ಯಾಕೆಂದರೆ ಆ ಬಗೆಯ ಸೈದ್ಧಾಂತಿಕ ಸೂತ್ರಗಳು ವಾಸ್ತವಾಂಶವನ್ನು ಗ್ರಹಿಸಲು ಮತ್ತು ಅದನ್ನು ನಿರೂಪಿಸಲು ಬೇಕಾಗುವ ತಾಕತ್ತು ಒದಗಿಸುವ ಪೋಷಕಾಂಶಗಳಾಗುವ ಬದಲು, ಅಧ್ಯಯನಕಾರ ಏನೇನನ್ನು ಗಮನಿಸಬಾರದು ಎಂದು ನಿರ್ಬಂಧಿಸುವ ಕಣ್ಣುಪಟ್ಟಿಗಳಾಗಿರುತ್ತವೆ.
ಸಂಶೋಧಕನಿಗೆ ಇರಬೇಕಾದುದು ಒಂದು ಅಧ್ಯಯನಶೀಲ ಪ್ರೇರಣೆ ಮತ್ತು ಅದಕ್ಕೆ ಅಗತ್ಯವಾದ ಬೌದ್ಧಿಕ ಸಿದ್ಧತೆ. ಒಂದು ವಿಷಯವನ್ನು ಗ್ರಹಿಸಲು ಆರಂಭಿಸುವಾಗಲೇ ಅದಕ್ಕಿರುವ ಪ್ರೇರಣೆಗಳು ಯಾವುವು? ಎಂಬುದು ತೀರ್ಮಾನವಾಗತೊಡಗಿರುತ್ತದೆ. ಅಧ್ಯಯನದ ದಿಕ್ಕು ಬದಲಾಯಿಸಬೇಕೆಂದರೆ ಅದಕ್ಕಿರುವ ಪ್ರೇರಣೆಯ ದಿಕ್ಕುಗಳನ್ನು
ಬದಲಿಸಿಕೊಳ್ಳಬೇಕಾಗುತ್ತದೆ. ಇದನ್ನೇ ಒಂದು ಸೈದ್ಧಾಂತಿಕ ತಳಹದಿ ಎಂದು ಸೂಚಿಸಬಹುದು.
ಸಮಾಜದಲ್ಲಿ ಕಂಡುಬರುವ ಯಾವುದೇ ವ್ಯಕ್ತಿ ಅಥವಾ ವಿದ್ಯಮಾನ ಇದರಿಂದ ಹೊರತಾಗಿರುವುದಿಲ್ಲ ಎಂಬುದನ್ನು ನಾವಿಲ್ಲಿ ಗುರುತಿಸಿಕೊಳ್ಳಬೇಕು. ಇದು ತುಂಬಾ ಕಟ್ಟುನಿಟ್ಟಾದ ಯಾಂತ್ರಿಕ ಕ್ರಿಯೆ ಅಲ್ಲದಿದ್ದಾಗಲೂ ಅದರ ಹಿನ್ನೆಲೆಯಲ್ಲಿ ಒಂದು ಸ್ಕೂಲವಾದ ಅಭಿಪ್ರೇರಣೆ ಮತ್ತು ಹಿತಾಸಕ್ತಿ ಎನ್ನುವುದು ಕೆಲಸ ಮಾಡುತ್ತಲೇ ಇರುತ್ತದೆ. ತಪ್ಪು ತಿಳಿವಳಿಕೆಯಿಂದಾಗಿ ಅಥವಾ ವಿಷಯಕ್ಕಿರುವ ಹಲವು ಮಗ್ಗುಲುಗಳನ್ನು ಗಮನಿಸಲು ವ್ಯವಧಾನ ಇಲ್ಲದ್ದರಿಂದಾಗಿ ಕೆಲವು ಸಲ ತಪ್ಪು ನಿರ್ಣಯಗಳಿಗೆ ಬಂದು ತಲುಪುವ ಸಾಧ್ಯತೆಗಳು ಅಧ್ಯಯನಕಾರನಿಗೆ ಇದ್ದೇ ಇರುತ್ತವೆ. ಆದರೆ ಹಿತಾಸಕ್ತಿಯ ಪ್ರಶ್ನೆಯೆಂಬುದು ಸ್ಪಷ್ಟವಿದ್ದಾಗ ಈ ತಪ್ಪು ನಿರ್ಣಯಗಳು ಸತತವಾಗಿ ಮುಂದುವರಿಯಲು ಅವಕಾಶವಿರುವುದಿಲ್ಲ.
2. ಬೌದ್ಧಿಕ ಸಿದ್ಧತೆ : ಅಧ್ಯಯನಕಾರನಿಗೆ ಒಂದು ಧೋರಣಾತ್ಮಕ ಸಿದ್ಧತೆ ಅಥವಾ ಮನೋಭಾವದ ಸಿದ್ಧತೆ ಇದ್ದರೆ ಮಾತ್ರ ಸಾಕಾಗುವುದಿಲ್ಲ. ಕೆಲವರು ತಮ್ಮ ಸೈದ್ಧಾಂತಿಕ ತಿಳುವಳಿಕೆಯನ್ನೇ ದೊಡ್ಡ ಪಾಂಡಿತ್ಯ ಎಂದು ತಿಳಿದು ಎಲ್ಲಾ ಬಗೆಯ ಅಧ್ಯಯನಕಾರರ ಮೇಲೆ ಬೌದ್ಧಿಕ ಪ್ರಹಾರ ನಡೆಸುವುದನ್ನು ನೋಡಿದ್ದೇವೆ. ತನಗೆ ಬೇಕಾದ ಸಾಮಾಜಿಕ ನಿಲುವುಗಳನ್ನು ಹೊಂದಿರುವ ಅಧ್ಯಯನಕಾರ ತಾನು ಪರಿಶೀಲಿಸಬಯಸುವ ವಿಷಯದ ಬಗ್ಗೆ ಸಮರ್ಪಕ ಜ್ಞಾನ ಪಡೆದಿರಬೇಕಾಗುತ್ತದೆ. ಹಾಗೆಯೇ ಹೆಚ್ಚಿನ ಅಧ್ಯಯನವನ್ನು ಕೈಗೊಳ್ಳಲು ಬೇಕಾದ ಬೌದ್ಧಿಕ ಸಿದ್ಧತೆಗಳನ್ನೂ ಮಾಡಿಕೊಳ್ಳಬೇಕಾಗುತ್ತದೆ.
ತನ್ನ ಆಸಕ್ತಿಯ ಕ್ಷೇತ್ರದಲ್ಲಿ ಅಧ್ಯಯನ ಕೈಗೊಳ್ಳಲು ಬೇಕಾಗುವ ಪ್ರಾಥಮಿಕ ಮಾಹಿತಿ ಪಡೆದುಕೊಳ್ಳುವುದು ಒಂದು ಅಧ್ಯಯನದ ಆರಂಭಿಕ ಸಿದ್ಧತೆ ಎನ್ನಬಹುದು. ನಂತರ ತನ್ನ ವಿಶೇಷ ಆಸಕ್ತಿಯ ಕ್ಷೇತ್ರದ ಬಗ್ಗೆ ಸಾಧ್ಯವಾದಷ್ಟು ವ್ಯಾಪಕವಾದ ಅಧ್ಯಯನವನ್ನು ಕೈಗೊಳ್ಳುವುದು ಎರಡನೆಯ ಸಿದ್ಧತೆ. ನಂತರ ತಾನು ಅಧ್ಯಯನ ಕೈಗೊಂಡಿರುವ ವಿಷಯಕ್ಕೆ ಸಂಬಂಧಪಟ್ಟ ಅನ್ಯ ಕ್ಷೇತ್ರಗಳ ಪೂರಕ ಅಧ್ಯಯನವನ್ನು ಕೈಗೊಳ್ಳುವುದು ಮೂರನೆಯ ಸಿದ್ಧತೆ. ನಂತರ ತನ್ನ ಅಧ್ಯಯನ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಇತರ ಕ್ಷೇತ್ರಗಳ ಮಾಹಿತಿಯಲ್ಲಿ ದೊರೆತಿರುವ ಅಂಶಗಳನ್ನು ಒಟ್ಟಗಿಟ್ಟಿಕೊಂಡು, ಅವುಗಳ ನಡುವೆ ಇರುವ ಪರಸ್ಪರ ಸಂಬಂಧವನ್ನು, ವಿದ್ಯಮಾನಗಳ ನಡುವಿನ ಹೊಂದಾಣಿಕೆಯನ್ನೂ ಗ್ರಹಿಸಬೇಕು. ಆಗ ಅಧ್ಯಯನಕ್ಕೆ ಒಂದು ಚಿತ್ರಣ ದೊರೆಯುತ್ತದೆ. ಆ ಚಿತ್ರಣವನ್ನು ನಮ್ಮ ವರ್ತಮಾನದ ಆಶೋತ್ತರಗಳ ಹಿನ್ನೆಲೆಯಲ್ಲಿ ವಿಶ್ಲೇಷಣೆಗೊಳಪಡಿಸಿ ಆ ಬಗ್ಗೆ ನಮ್ಮ ಅಭಿಪ್ರಾಯವನ್ನು ಮಂಡಿಸಬಹುದು.
3. ವರ್ತಮಾನದ ಹಿನ್ನೆಲೆ : ಸಾಮಾನ್ಯವಾಗಿ ಅಧ್ಯಯನಕಾರ ವರ್ತಮಾನಕ್ಕೆ ಸಂಬಂಧಪಟ್ಟವನಾಗಿರುತ್ತಾನೆ. ಆತ ಅಧ್ಯಯನಕ್ಕೆ ಆರಿಸಿಕೊಳ್ಳುವುದು ಈ ಮೊದಲೇ ನಡೆದುಹೋದ ವಿಷಯವೊಂದರ ವಸ್ತುವನ್ನು ಅದು ಸಾಹಿತ್ಯವಾಗಿರಲಿ, ಸಾಹಿತ್ಯ ಕೃತಿಯಾಗಿರಲಿ, ಸಾಮಾಜಿಕ ವಿದ್ಯಮಾನವಾಗಿರಲಿ, ಸಾಂಸ್ಕೃತಿಕ ಅಂಶಗಳ ಅಸ್ತಿತ್ವವಾಗಿರಲಿ- ಅವುಗಳು ಈಗಾಲೇ ಸಂಭವಿಸಿ ಹೋದ ಸಂಗತಿಗಳಾಗಿರುತ್ತವೆ. ಆ ಸಂಗತಿಗಳನ್ನು ವರ್ತಮಾನದ ಸಾಮಾಜಿಕ ಪ್ರೇರಣೆಗಳ ಹಿನ್ನಲೆಯಲ್ಲಿ ಗ್ರಹಿಸಿ ಮನಃ ಮಂಡಿಸುವುದು ಅಧ್ಯಯನಕಾರನ ಒಂದು ಗುರಿ.
ಈ ಮೊದಲೇ ಸಂಭವಿಸಿರುವ ಈ ವಿದ್ಯಮಾನ ಆಗ ಹೇಗೆ ಸಂಭವಿಸಿತು? ಮತ್ತು ಯಾಕೆ ಸಂಭವಿಸಿತು? ಅಥವಾ ಈ ಹಿಂದಿನಿಂದ ಹೇಳುತ್ತಾ ಬರಲಾಗಿರುವ ವಿಷಯ ಈ ಹಿಂದೆ ಏನಾಗಿತ್ತು? ಅದು ಯಾಕೆ ಹಾಗಿತ್ತು? ಎಂಬುದನ್ನು ವಸ್ತುನಿಷ್ಠವಾಗಿ ಗ್ರಹಿಸಲು ಪ್ರಯತ್ನಿಸುವುದು ಒಂದು ಹಂತ. ಈ ಹಂತದಲ್ಲಿ ಗಮನದಲ್ಲಿಟ್ಟುಕೊಳ್ಳಲೇಬೇಕಾದ ಅಂಶವೇನೆಂದರೆ ಅಂದಿನ ಸಾಂದರ್ಭಿಕತೆಯನ್ನು ಆ ಕಾಲಘಟ್ಟದ ಹಿನ್ನೆಲೆಯಲ್ಲಿಯೇ ಗ್ರಹಿಸಿಕೊಳ್ಳುವುದು ಎಂಬ ಮುಂಜಾಗರೂಕತೆ. ಯಾಕೆಂದರೆ ವರ್ತಮಾನ ಸಮಾಜದಲ್ಲಿ ಸಂಭವಿಸುವ ಘಟನೆಗಳು ಮತ್ತು ವಿದ್ಯಮಾನಗಳಿಗೆ ವರ್ತಮಾನ ಕಾಲಘಟ್ಟದ ಪ್ರೇರಣೆಗಳಿರುತ್ತವೆ. ಈ ಪ್ರೇರಣೆಗಳ ಹಿನ್ನೆಲೆಯಲ್ಲಿ ಈ ಹಿಂದೆ ಸಂಭವಿಸಿದ ಒಂದು ಘಟನೆಯ ಅಥವಾ ಸಂಗತಿಯ ಆಶಯಗಳನ್ನು ಗ್ರಹಿಸಲು ಪ್ರಯತ್ನಿಸಿದಾಗ ಅವು ತಪ್ಪು ಸೂಚನೆಗಳನ್ನು ಕೊಡುವ ಸಾಧ್ಯತೆಗಳಿರುತ್ತವೆ.
ಆದ್ದರಿಂದಲೇ ಚಾರಿತ್ರಿಕತೆ ಎಂಬ ಅಂಶದಿಂದ ಪ್ರತ್ಯೇಕಗೊಳಿಸಿ ಯಾವುದೇ ವಿಷಯವನ್ನು ಗ್ರಹಿಸುವುದರಿಂದ ಅಧ್ಯಯನಕ್ಕೆ ಬೇಕಾದ ಅರ್ಥಪೂರ್ಣತೆಯನ್ನು ತಂದುಕೊಡುವುದು ಸಾಧ್ಯವಿಲ್ಲ. ಪ್ರತಿಯೊಂದು ಮಾನವಿಕ ವಿಷಯಕ್ಕೂ ಒಂದು ಚಾರಿತ್ರಿಕತೆಯ ಆವರಣ ಇದ್ದೇ ಇರುತ್ತದೆ.
4. ಚಾರಿತ್ರಿಕತೆಯ ಆವರಣ : ನಾವು ಅಧ್ಯಯನ ಮಾಡಹೊರಟಿರುವ ವಿಷಯದ ಚಾರಿತ್ರಿಕ ವ್ಯಾಪ್ತಿ ಯಾವುದು ಎಂಬುದು ನಿಶ್ಚಿತಗೊಂಡಿದ್ದರೆ ಒಳ್ಳೆಯದು. ಹೀಗೆ ನಿಶ್ಚಿತಗೊಂಡಿಲ್ಲದ ವಿಷಯಗಳನ್ನು ಅಧ್ಯಯನ ಮಾಡುವುದಕ್ಕೆ ಮೊದಲು ಅದರ ಚಾರಿತ್ರಿಕ ಘಟ್ಟದ ಸಂಭಾವ್ಯತೆಯನ್ನು ಚಿತ್ರಿಸಿಕೊಂಡು ಅದರಿಂದ ಹಿಂದಕ್ಕೂ ಅದರಿಂದ ಮುಂದಕ್ಕೂ ಗಮನಹರಿಸಿ, ಅದನ್ನು ಇತರೆ ಆಧಾರಗಳ ಬೆಂಬಲದಿಂದ ನಿಶ್ಚಿತಗೊಳಿಸಿಕೊಳ್ಳುವುದು ಉತ್ತಮ. ಯಾವುದೇ ವಿಷಯದ ಚಾರಿತ್ರಿಕ ಘಟ್ಟವನ್ನು ಕಂಡುಕೊಳ್ಳುವುದೆಂದರೆ ಅದಕ್ಕೆ ಇಸವಿ, ತೇದಿ ಇತ್ಯಾದಿಗಳನ್ನು ಕಂಡುಹಿಡಿಯುವುದು ಎಂದಲ್ಲ. ಒಂದು ಸ್ಕೂಲ ಸಂದರ್ಭವನ್ನಾದರೂ ಖಚಿತವಾಗಿ ಗ್ರಹಿಸಿದರೆ ಅಧ್ಯಯನ ಸುಗಮವಾಗಿ ನಡೆಯುತ್ತದೆ.
ಈ ಚಾರಿತ್ರಿಕ ಘಟ್ಟ ಎನ್ನುವುದು ಅಂದಿನ ಜನಜೀವನದ ಪರಿಸ್ಥಿತಿಗಳನ್ನು, ಸಾಂಸ್ಕೃತಿಕ ರೀತಿ ರಿವಾಜುಗಳನ್ನು, ಉತ್ಪಾದನಾ ಪ್ರಕ್ರಿಯೆಗಳನ್ನು, ರಾಜ್ಯಾಡಳಿತದ ಅಂಶಗಳನ್ನು, ಸಾಮಾಜಿಕ ಸಂಘರ್ಷಗಳ ಬಗೆಗಳನ್ನೂ ಗ್ರಹಿಸಿಕೊಳ್ಳಲು ನೆರವು ನೀಡುತ್ತದೆ. ಅಂದರೆ ಈ ಅಂಶಗಳ ಸ್ಕೂಲ ಪರಿಚಯ ಇದ್ದರೆ ಸಾಹಿತ್ಯ ಅಥವಾ ಸಾಂಸ್ಕೃತಿಕ ಅಧ್ಯಯನ ಸೂಕ್ಷ್ಮವಾಗಿ ಕೈಗೊಳ್ಳಲು ಸಾಧ್ಯವಾಗುತ್ತದೆ.
5. ಆಕರಗಳ ಪ್ರಶ್ನೆ : ಚಾರಿತ್ರಿಕ ಘಟ್ಟವನ್ನು ಗ್ರಹಿಸುವುದು ಎಂದಾದೊಡನೆ ಆದಕ್ಕಿರುವ ಮಾಹಿತಿ ಮೂಲಗಳ ಪ್ರಶ್ನೆ ಎದುರಾಗುತ್ತದೆ. ಭಾರತೀಯ ಸಮಾಜದ ಸಂದರ್ಭದಲ್ಲಿ ಪ್ರತಿಯೊಂದನ್ನೂ ಲಿಖಿತ ದಾಖಲೆಗಳಲ್ಲಿ ಹುಡುಕುವುದು ಹಾಗೂ ನಿರೀಕ್ಷಿಸುವುದು ಕಷ್ಟದ ವಿಷಯ. ಹಾಗೆಂದರೆ ಅದು ಅಸಾಧ್ಯವಾದ ವಿಷಯ ಎಂದರ್ಥವಲ್ಲ. ಚಾರಿತ್ರಿಕ ಸಂದರ್ಭವನ್ನು ಗ್ರಹಿಸಿಕೊಳ್ಳಲು ನಾವು ಇತರ ಮೂಲಗಳ ಮಾಹಿತಿಯನ್ನು ಪರಿಶೀಲಿಸಬೇಕಾಗುತ್ತದೆ ಅಷ್ಟೆ, ಜನಪದ ಕಾವ್ಯ ಜನರ ನಡುವೆ ಬಳಕೆಯಲ್ಲಿರುವ ನಾಣ್ಣುಡಿ, ಗಾದೆಗಳು, ಸಾಂಸ್ಕೃತಿಕ ಆಚರಣೆಗಳು, ಕ್ರಿಯಾವಿಧಿಗಳು, ಹಬ್ಬಗಳು, ದೇವತೆಗಳಿಗೆ ಸಂಬಂಧಪಟ್ಟ ಪೂಜೆಗಳು, ಕೃಷಿಗೆ ಸಂಬಂಧಪಟ್ಟ ಆಚರಣೆಗಳು, ಗ್ರಾಮಗಳ ಇತಿಹಾಸ, ಕುಲ ಕಥನಗಳು ಮುಂತಾದ ನೂರಾರು ಬಗೆಯ ಮಾಹಿತಿ ಕೋಶ ನಮ್ಮ ಸಮಾಜದಲ್ಲಿ ಲಭ್ಯವಿದೆ.
ಈ ಮಾಹಿತಿ ಕೋಶದಿಂದ ನಮ್ಮ ಅಧ್ಯಯನಕ್ಕೆ ಅಗತ್ಯವಿರುವ ಸೂಚನೆಗಳನ್ನು ಮತ್ತು ಸಾಕ್ಷ್ಯಾಧಾರಗಳನ್ನು ನಾವು ಪಡೆದುಕೊಳ್ಳಬಹುದಾಗಿದೆ. ಇವು ಕೆಲವು ಸಲ ಸಂಗ್ರಹಿತ ರೂಪದಲ್ಲಿರುತ್ತವೆ. ಮತ್ತೆ ಕೆಲವು ಸಲ ಸಮುದಾಯದಲ್ಲಿ ಮೌಖಿಕವಾಗಿ ಅಥವಾ ಆಚರಣಾತ್ಮಕವಾಗಿ ಉಳಿದುಕೊಂಡಿರುತ್ತವೆ. ಅವುಗಳನ್ನು ತಿಳಿದುಕೊಳ್ಳಲು ಕ್ಷೇತ್ರಕಾರ್ಯ ಭೇಟಿಯನ್ನು ಕೈಗೊಳ್ಳಬೇಕಾಗಬಹುದು.
6. ಕ್ಷೇತ್ರಕಾರ್ಯದ ಸೂಕ್ಷ್ಮತೆಗಳು : ಎಷ್ಟೋ ಸಲ ನಮಗೆ ಬೇಕಾದ ಅಂಶ ನೇರವಾದ ರೂಪದಲ್ಲಿ ದೊರೆಯದಿರಬಹುದು. ಆದು ಸಂಕೇತಗಳ ರೂಪದಲ್ಲಿ ಅಥವಾ ಪರೋಕ್ಷ ವಿಧದಲ್ಲಿ ಅಸ್ತಿತ್ವದಲ್ಲಿರಬಹುದು. ಅದನ್ನು ಗ್ರಹಿಸುವುದಕ್ಕೆ ಅಗತ್ಯವಾದ ಶೋಧನಾ ಪ್ರವೃತ್ತಿ ನಮಗೆ ಸತತವಾಗಿ ಇರಬೇಕಾಗುತ್ತದೆ. ಇದನ್ನು ಚಿಕಿತ್ಸಕ ಬುದ್ಧಿ ಎಂದು ಕರೆಯಬಹುದು. ಸಾಮಾನ್ಯವಾಗಿ ಜನಪದರ ಆಚರಣೆ, ಹಬ್ಬ, ಸಂಪ್ರದಾಯ ಇತ್ಯಾದಿಗಳನ್ನು ಗಮನಿಸುವಾಗ ಅದರಲ್ಲಿ ಎದ್ದು ಕಾಣುವ ಪ್ರಧಾನಾಂಶಗಳನ್ನು ಮಾತ್ರ ಗಮನಿಸಿದರೆ ಸಾಲದು. ಅಲ್ಲಿ ಬಳಕೆಯಲ್ಲಿರುವ ಪ್ರತಿ ವಿವರದ ಬಗ್ಗೆಯೂ ಗಮನಕೊಟ್ಟಷ್ಟು ನಮಗೆ ಬೇಕಾದ ಮಾಹಿತಿ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ.
ಆಚರಣೆಯ ಪ್ರಧಾನ ರೂಪಗಳು ಪ್ರಮುಖವಾಗಿ ಆ ಸಮುದಾಯ ಅಂದಿನ ಸಂದರ್ಭಗಳಲ್ಲಿ ಯಾವುದನ್ನು ಮನಸಾರೆ ಸಮರ್ಥಿಸಿಕೊಳ್ಳುತ್ತಿರುತ್ತದೋ ಅಥವಾ ಯಾವ ಬಗೆಯ ಆಚರಣೆಗಳನ್ನು ಆಗಿನ ಆಳ್ವಿಕೆದಾರ ಸಮಾಜ ಸಮ್ಮತಿಸುತ್ತಿರುತ್ತದೋ ಅಂತವುಗಳನ್ನು ಮಾತ್ರ ಮೆರೆಸುವ, ಮಿಕ್ಕ ಅಂಶಗಳನ್ನು ಗೌಣಗೊಳಿಸುವ ಪ್ರವೃತ್ತಿಗಳನ್ನು ಬೆಳೆಸಿಕೊಂಡಿದ್ದರೆ ಆಶ್ಚರ್ಯವಿಲ್ಲ. ಆದ್ದರಿಂದ ಅತ್ಯಂತ ವ್ಯವಧಾನದಿಂದ ಅದರ ಸೂಕ್ಷ್ಮ ವಿವರಗಳನ್ನೂ ಗಮನಿಸಿ ಗಣನೆಗೆ ತೆಗೆದುಕೊಳ್ಳಬೇಕು.
ಚಾಲ್ತಿಯಲ್ಲಿರುವ ಸಾಂಸ್ಕೃತಿಕಾಚಾರಣೆಗಳಿಂದ ನಮಗೆ ಬೇಕಾದ ಮಾಹಿತಿಯನ್ನು ಪಡೆಯುವುದು ಮಾತ್ರವಲ್ಲದೆ, ಆ ಆಚರಣೆಯ ಹಿಂದಿನ ಸ್ವರೂಪಗಳೇನಾಗಿದ್ದವು ಎಂಬುದನ್ನು, ಹಾಗೆಯೇ ಅವುಗಳಲ್ಲಿ ಏನೇನನ್ನು ಬದಲಿಸಲಾಗಿದೆ ಎಂಬುದನ್ನು ಹಿರಿಯರಿಂದ, ತಿಳಿದವರಿಂದ ಸಂಗ್ರಹಿಸಿಕೊಳ್ಳಬೇಕಾಗುತ್ತದೆ. ಇದಕ್ಕೆ ಮತ್ತೊಂದು ಬಗೆಯ ವಿಧಾನವನ್ನೂ ಬಳಸಿಕೊಳ್ಳಬಹುದು. ಒಂದೇ ಬಗೆಯ ಆಚರಣೆ ಭಿನ್ನ ಪ್ರದೇಶಗಳಲ್ಲಿ ಭಿನ್ನ ಸಮುದಾಯಗಳಲ್ಲಿ ಯಾವ ರೀತಿ ಆಚರಿಸಲಾಗುತ್ತದೆ ಎಂಬುದನ್ನು ಗಮನಿಸಿ, ಅವುಗಳ ನಡುವೆ ಇರುವ ವ್ಯತ್ಯಾಸವನ್ನು ಗುರುತಿಸಿಕೊಳ್ಳಬೇಕಾಗುತ್ತದೆ.
ಒಂದು ಪ್ರದೇಶದ ಆಚರಣೆ ಯಾವುದೋ ಒಂದನ್ನು ಉಳಿಸಿಕೊಂಡು, ಮತ್ಯಾವುದೋ ಒಂದನ್ನು ಕೈಬಿಟ್ಟಿರುತ್ತದೆ. ಹಾಗೆಯೇ ಮತ್ತೊಂದು ಆಚರಣೆ ಒಂದನ್ನು ಕೈಬಿಟ್ಟು ಮತ್ತೇನನ್ನೋ ಜೋಡಿಸಿಕೊಂಡಿರುತ್ತದೆ. ಅದೆಲ್ಲಾ ಸನ್ನಿವೇಶಗಳನ್ನು ಅವಲಂಬಿಸಿದ ಬೆಳವಣಿಗೆಯಾದ್ದರಿಂದ ನಾವು ಅವುಗಳ ತೌಲನಿಕ ಅಧ್ಯಯನದಿಂದ ಸಾಧ್ಯವಾದಷ್ಟು ಮೂಲ ಸ್ವರೂಪವನ್ನು ಗ್ರಹಿಸಿಕೊಳ್ಳಬಹುದಾಗಿರುತ್ತದೆ. ಈ ವಿಧಾನದಲ್ಲಿ ಈಗಿರುವ ಪದ್ಧತಿ ತಪ್ಪು, ಹಿಂದಿನ ಪದ್ಧತಿ ಸರಿ ಎಂಬ ನೆಲೆಗಟ್ಟಿನಿಂದ ನಾವು ಆ ವಿದ್ಯಮಾನವನ್ನು ಗ್ರಹಿಸಬೇಕಾಗಿಲ್ಲ. ಇಂದಿನದು ಇಂದಿಗೆ ಸರಿ, ಅಂದಿನದು ಅಂದಿಗೆ ಸರಿ. ಯಾವ ತಳಹದಿಯ ಮೇಲೆ ಎಂತಹ ಸಂರಚನೆ ನಿರ್ಮಾಣವಾಗಿದೆ? ಈ ನಿರ್ಮಾಣ ಪ್ರಕ್ರಿಯೆಯಲ್ಲಿ ಯಾವ ಯಾವ ಪ್ರಭಾವಗಳು ಪ್ರೇರಕ ಶಕ್ತಿಯಾಗಿ ಕೆಲಸ ನಿರ್ವಹಿಸಿವೆ? ಈ ಸ್ಥಿತ್ಯಂತರಗಳಿಗೆ ಏನೇನು ಕಾರಣಗಳಿವೆ?
ಎಂಬುದನ್ನು ಗ್ರಹಿಸುವುದು ಮಾತ್ರ ನಮ್ಮ ಉದ್ದೇಶವೇ ಹೊರತು ಅವುಗಳ ರೀತಿ ರಿವಾಜು ಏನಾಗಿರಬೇಕಿತ್ತು ಎಂಬ ಬಗ್ಗೆ ನಿರ್ಣಯಗಳನ್ನು, ತೀರ್ಮಗಳನ್ನು ಜಾರಿಗೊಳಿಸುವುದು ನಮ್ಮ ಕೆಲಸವಲ್ಲ.
7. ಮಿತಿಗಳನ್ನು ನೆನಪಿಡುವುದು : ಸಾಮಾನ್ಯವಾಗಿ ಜನಸಮುದಾಯಗಳ ಸಂಸ್ಕೃತಿಯನ್ನು ಒಂದು ಆಕರವಾಗಿ ಮಾಡಿಕೊಂಡು ಅಧ್ಯಯನಗಳನ್ನು ನಡೆಸುವಾಗ ನಾವು ಸಮಯ ಮತ್ತು ಸಂಪನ್ಮೂಲಗಳ ಮಿತಿಗಳಿಗೆ ಒಳಪಟ್ಟಿರುತ್ತೇವೆ. ನಮ್ಮ ಸಮಾಜದ ವೈವಿಧ್ಯತೆ ಎಷ್ಟಿದೆ ಎಂದರೆ ಪ್ರತೀ ವಿವರಗಳನ್ನೂ ಅದರ ಎಲ್ಲ ವ್ಯತ್ಯಾಸಗಳೊಂದಿಗೆ, ವೈವಿಧ್ಯತೆಯೊಂದಿಗೆ ಒಂದೇ ಸಲಕ್ಕೆ ಸಂಗ್ರಹಿಸುವುದು ಸಾಧ್ಯವಾಗದೇ ಹೋಗಬಹುದು. ಅಂತಹ ಸಂದರ್ಭದಲ್ಲಿ ನಾವು ಅಧ್ಯಯನವೊಂದನ್ನು ಪೂರೈಸಿ, ಆ ಬಗ್ಗೆ ಒಂದು ವಿಶ್ಲೇಷಣೆಯನ್ನು ಮಾಡಿದ್ದಾದ ಮೇಲೂ ಆ ವಿಶ್ಲೇಷಣೆ ನಂತರದಲ್ಲಿ ಉದ್ದೇಶಪೂರ್ವಕವಾಗಿ ಅಥವಾ ಪ್ರಾಸಂಗಿಕವಾಗಿ ಒದಗುವ ಮಾಹಿತಿಯ ಆಧಾರದಲ್ಲಿ ಬದಲಾಗುತ್ತಾ ಹೋಗಬಹುದು ಅಥವಾ ಮತ್ತಷ್ಟು ಬಲಗೊಳ್ಳುತ್ತಾ ಬೆಳೆಯಬಹುದು. ಹಾಗಾಗುವ ಸಾಧ್ಯತೆ ಇದೆ ಎಂಬ ಮುಕ್ತ ಮನಸ್ಸಿನ ನಿಲುವನ್ನು ನಾವೇ ಕೈಗೊಂಡ ಅಧ್ಯಯನಗಳ ಬಗ್ಗೆ ಹೊಂದಿರಬೇಕಾದುದು ಅಗತ್ಯ.
8. ಅನ್ನೋನ್ಯಾಶ್ರಯ : ಸಂಸ್ಕೃತಿಯನ್ನು ಅಥವಾ ಸಾಹಿತ್ಯವನ್ನು ಅಥವಾ ಧರ್ಮಗಳ ತಾತ್ವಿಕ ಸಂಘರ್ಷಗಳನ್ನು ನಾವು ಪೂರ್ಣ ಬಿಡಿಬಿಡಿಯಾದ ಘಟಕಗಳೆಂಬಂತೆ ನೋಡಬರುವುದಿಲ್ಲ. ಅವುಗಳ ನಡುವೆ ಒಂದು ಕೊಳು ಕೊಡೆ ಇರುತ್ತದೆ. ಪರಸ್ಪರ ಸಂಬಂಧ ಅವುಗಳ ನಡುವೆ ಪ್ರವಹಿಸುತ್ತಿದ್ದು, ಒಂದನ್ನೊಂದು ಪ್ರಭಾವಿಸುತ್ತಿರುತ್ತವೆ. ಒಂದು ಸಂದರ್ಭದ ಕಲೆ, ಸಾಹಿತ್ಯ ಅಥವಾ ತತ್ವಶಾಸ್ತ್ರ ಇವು ಅವಶ್ಯಕವಾಗಿ ಅಂದಿನ ಜನಜೀವನದ ಅಭಿವ್ಯಕ್ತಿಯ ಭಿನ್ನ ರೂಪಗಳಾಗಿರುತ್ತವೆ. ಆಚರಣೆಗಳು, ಶಾಸ್ತ್ರ, ಸಂಪ್ರದಾಯ ಮುಂತಾದವುಗಳಿಗೆ ಕೂಡ ಭೌತಿಕ ಜೀವನದ ತಳಹದಿ ಇರುತ್ತದೆ. ಆದ್ದರಿಂದ ಅಲ್ಲಿನ ಆಯಾ ನಿರ್ದಿಷ್ಟ ಕಾಲಘಟ್ಟದ ಭೌತಿಕ ಜೀವನದ ಬಗ್ಗೆ ನಾವು ಸಮಗ್ರವಾಗಿ ತಿಳಿದಷ್ಟೂ ಅದರ ಅಭಿವ್ಯಕ್ತಿಯ ರೂಪಗಳಾಗಿರುವ ಸಾಹಿತ್ಯ, ಸಂಸ್ಕೃತಿಗಳನ್ನು ಅರ್ಥೈಸುವುದರಲ್ಲಿ ಹೆಚ್ಚಿನ ಹಿಡಿತ ಸಿಗುತ್ತದೆ.
ಸಾಹಿತ್ಯದಲ್ಲಿ ಸಮಾಜವಿದೆ ಹಾಗೂ ಸಮಾಜದಲ್ಲಿ ಈ ಸಾಹಿತ್ಯವಿದೆ. ಹಾಗೆಯೇ ಸಂಸ್ಕೃತಿಯು ಸಮಾಜದೊಳಗಿದೆ ಹಾಗೂ ಸಮಾಜವೇ ಸಂಸ್ಕೃತಿಯನ್ನು ನಿರ್ಮಿಸಿದೆ. ಇದು ಗತಿತಾರ್ಕಿಕ ಸಂಬಂಧ. ಒಂದನ್ನು ಬಿಟ್ಟು ಒಂದು ಇರಲಾಗದ ಈ ಅಂಶಗಳನ್ನು ಕುರಿತು ನಾವು ಅಧ್ಯಯನ ಮಾಡುವಾಗ ಇದೇ ಪದ್ಧತಿಯನ್ನು ಅನುಸರಿಸುವುದು ಸೂಕ್ತ. ಸಂಸ್ಕೃತಿಯನ್ನು ಅಧ್ಯಯನ ಮಾಡುವಾಗ ಸಮಾಜವನ್ನು ನೋಡಬೇಕು. ಸಮಾಜವನ್ನು ಅಧ್ಯಯನ ಮಾಡುವಾಗ ಸಂಸ್ಕೃತಿಯನ್ನು ನೋಡಬೇಕು.
ಮಾನವಿಕ ವಿಷಯಗಳನ್ನು ಬಿಡಿಬಿಡಿಯಾಗಿ ನೋಡುವ ಪ್ರತ್ಯೇಕೀಕರಣ ಧೋರಣೆ ನಮಗೆ ಸಮಗ್ರ ಗ್ರಹಿಕೆಯನ್ನು ಒದಗಿಸುವುದಿಲ್ಲ. ಅದರ ನಿಜಾರ್ಥದಲ್ಲಿ ನೋಡಿದರೆ ಕಥನಕಾರನೊಬ್ಬ ಪರೋಕ್ಷ ಇತಿಹಾಸಕಾರನೂ ಸಮಾಜಶಾಸ್ತ್ರಜ್ಞನೂ ಆಗಿರುವಂತಿರುತ್ತದೆ. ಹಾಗೆಯೇ ಇತಿಹಾಸಕಾರ ಅಥವಾ ಸಮಾಜಶಾಸ್ತ್ರಜ್ಞ ವಿಭಿನ್ನಾರ್ಥದಲ್ಲಿ ಕಥನಕಾರನೂ ಆಗಿರುತ್ತಾನೆ. ಇತಿಹಾಸ ಎಂದರೆ ಬರೀ ಘಟನಾವಳಿಗಳಾಗಲೀ, ರಾಜವಂಶಗಳ ಸಾಮಾಜ್ಯಗಳ ಏಳುಬೀಳುಗಳ ದಾಖಲಾತಿ ಅಲ್ಲ ಎಂಬುದನ್ನು ಗತಿತಾರ್ಕಿಕ ದೃಷ್ಟಿಕೋನವುಳ್ಳ ಹಲವಾರು ಇತಿಹಾಸಕಾರರು ಪ್ರತಿಪಾದನೆ ಮಾಡಿ ಸುಮಾರು ನೂರು ವರ್ಷಗಳೇ ಕಳೆದಿವೆ. ಹಾಗೆಯೇ ಸಾಹಿತ್ಯ ಮತ್ತು ಸಂಸ್ಕೃತಿ ಎಂದರೆ ಕೇವಲ ಸೌಂದರ್ಯ ಮೀಮಾಂಸೆ ಮಾತ್ರವಲ್ಲ ಎಂಬುದನ್ನು ಪ್ರತಿಪಾದಿಸಿ ಕಡೆಯ ಪಕ್ಷ ಅರ್ಧ ಶತಮಾನವಾದರೂ
ಕಳೆದಿದೆ.
9. ಶಿಕ್ಷಣದ ದೋಷ : ಹೀಗಿದ್ದಾಗಲೂ ನಮ್ಮ ಅಧ್ಯಯನ ಕ್ರಮಗಳು ಏಕಮುಖವಾಗಿ ಅಥವಾ ಏಕ ಕ್ಷೇತ್ರ ಕೇಂದ್ರಿತವಾಗಿ ಯಾಕೆ ಇನ್ನೂ ಉಳಿದುಕೊಂಡು ಬಂದಿವೆ ಎಂದರೆ ಅದಕ್ಕೆ ಬಹಳ ಮುಖ್ಯವಾದ ಕಾರಣವೆಂದು ಕಾಣಿಸುತ್ತಿರುವುದು ನಮ್ಮ ಶಿಕ್ಷಣ ಪದ್ಧತಿಯ ದೋಷ, ಒಬ್ಬ ಇತಿಹಾಸಕಾರನಿಗೆ ಅವನ ಪಠ್ಯಗಳಲ್ಲಿ ಪ್ರಾಚೀನ ಸಾಹಿತಿಗಳು ಹೆಸರು ಮತ್ತು ವರ್ಷಾವಳಿಗಳ ನಮೂದಾಗಿ ಮಾತ್ರ ಪರಿಚಯವಾಗಿರುತ್ತಾರೆ. ಸಂಸ್ಕೃತಿ ತಜ್ಞನಿಗೆ ಇತಿಹಾಸವೆಂಬುದು ಕೆಲವು ರಾಜವಂಶಗಳ ಕಾಲಘಟ್ಟವಾಗಿ ಮಾತ್ರ ಪರಿಚಯವಾಗಿರುತ್ತದೆ.
ಹೀಗಿರುವ ಸನ್ನಿವೇಶದಲ್ಲಿ ಒಬ್ಬ ವಿದ್ವಾಂಸ ತನ್ನದೇ ಕ್ಷೇತ್ರದಲ್ಲಿ ಹೆಚ್ಚು ತಜ್ಞನಾಗುತ್ತಾ ಹೋದಂತೆ ಇತರೆ ಕ್ಷೇತ್ರಗಳ ಅಧ್ಯಯನಾಂಶಗಳು ಹೆಚ್ಚು ಹೆಚ್ಚು ಅಪರಿಚಿತಗೊಳ್ಳುತ್ತಾ ಹೋಗುತ್ತವೆ. ಇದರಿಂದ ಬದುಕಿನ ಸಮಗ್ರ ಗ್ರಹಿಕೆಯ ಅವಕಾಶ ಕಡಿತಗೊಳ್ಳುತ್ತದೆ. ಶಾಸ್ತ್ರಗಳಾಗಲೀ, ಸಿದ್ಧಾಂತಗಳಾಗಲೀ ಬದುಕಿನ ವಿಸ್ತಾರ ಭಿತ್ತಿಯ ಮೇಲೆಯೇ ರೂಪಗೊಂಡಿರುತ್ತವೆ. ಅದನ್ನು ಗ್ರಹಿಸದೆ ಒಂದು ಸಂಗತಿ ಅಥವಾ ವಿದ್ಯಮಾನವನ್ನು ಅಷ್ಟಕ್ಕೇ ತುಂಡರಿಸುವುದರಿಂದ ಹುಟ್ಟುವ ವಿಶ್ಲೇಷಣೆಗಳು ಅಪೂರ್ಣವಾಗಿರುತ್ತವೆ.
ತನ್ನ ಪ್ರದೇಶದ, ರಾಜ್ಯದ ಹಾಗೂ ದೇಶದ ಇತಿಹಾಸ ಪರಿಚಯ ಯಾವುದೇ ಅಧ್ಯಯನಕ್ಕೆ ಅತ್ಯಂತ ಅವಶ್ಯಕ ಸಾಮಗ್ರಿ, ಹಾಗೆಯೇ ವರ್ತಮಾನ ಸಮಾಜದ ಬಗೆಗಿನ ವಿಸ್ತ್ರತ ತಿಳಿವಳಿಕೆ ಕೂಡ ಒಂದು ಪ್ರಬಲವಾದ ಆಕರ. ಇವೆರಡನ್ನೂ ಹೆಚ್ಚು ಸೂಕ್ಷ್ಮವಾಗಿ ಗ್ರಹಿಸಿದಂತೆಲ್ಲಾ ಮಾನವಿಕ ವಿಜ್ಞಾನಗಳ ಅಧ್ಯಯನದ ಸಮಸ್ಯೆಗಳಲ್ಲಿ ಉಂಟಾಗುತ್ತಿರುವ ತೊಡಕು ನಿವಾರಣೆಯಾಗುತ್ತದೆ. ಇದೇ ಬಗೆಯಲ್ಲಿ ಪುರಾಣಗಳು, ಧರ್ಮಶಾಸ್ತ್ರ ಗ್ರಂಥಗಳು, ಪ್ರಾಚೀನ ನ್ಯಾಯ ಕಟ್ಟಳೆಗಳು, ಆಡಳಿತಾತ್ಮಕ ಸ್ವರೂಪಗಳು, ಕಾವ್ಯಗಳು, ಕಲಾ ಪ್ರಕಾರಗಳು ಮುಂತಾದವುಗಳನ್ನು ಸಾಕಷ್ಟು ಪ್ರಮಾಣದಲ್ಲಿ ಅರಿತಿರುವುದು ಬಹಳ ಮುಖ್ಯ.
ಸಾರಾಂಶದಲ್ಲಿ ಈ ಅಂಶವನ್ನು ಹೇಳಬೇಕೆಂದರೆ ಸಮಗ್ರ ಗ್ರಹಿಕೆ ಯಾವಾಗಲೂ ಸಮಗ್ರ ಜ್ಞಾನದ ಹಿನ್ನೆಲೆಯಿಂದ ಮೂಡಿಬರುತ್ತದೆ. ಅಧ್ಯಯನ ಅಥವಾ ಸಂಶೋಧನೆ ಯಾವಾಗಲೂ ಬದುಕಿನ ಭಿನ್ನ ಭಿನ್ನ ಕ್ಷೇತ್ರಗಳ ನಡುವೆ ಇರುವ ಅಂತರ್ ಸಂಯೋಜನೆಯನ್ನೂ, ಪರಸ್ಪರ ಪ್ರಭಾವವನ್ನೂ ಗಮನಿಸಿ ಮುಂದೆ ಹೋಗಬೇಕು.
ಹೆಚ್ಚು ಹೆಚ್ಚು ಸಿದ್ಧಾಂತಗಳು ಪರಿಚಯವಾದಷ್ಟೂ ಹೆಚ್ಚು ಗಹನವಾದ ಅಧ್ಯಯನವನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ ಎಂಬ ಮಾತು ನಿಜ. ಆದರೆ ಈ ಮೊದಲೇ ಸೂಚಿಸಿದಂತೆ ಸಿದ್ಧಾಂತಗಳ ಉಲ್ಲೇಖವನ್ನು, ಸೂತ್ರಗಳ ಉರುಹಚ್ಚುವಿಕೆಯನ್ನೂ ಹೆಚ್ಚು ಮಾಡಿಕೊಳ್ಳುವುದರಿಂದ ಇದು ಸಂಭವಿಸುವುದಿಲ್ಲ. ಬದಲಿಗೆ ಪರಿಚಯವಾದ ಸಿದ್ಧಾಂತಗಳ ಸಾರಾಂಶವನ್ನು ನಮ್ಮ ಕ್ಷೇತ್ರದ ಅಧ್ಯಯನಕ್ಕೆ ಅನ್ವಯಗೊಳಿಸಿಕೊಳ್ಳುವುದರ ಮುಖಾಂತರ ಮಾತ್ರವೇ ಅದನ್ನು ಸೃಜನಾತ್ಮಕವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ.
10. ಪೂರ್ವ ಸೂರಿಗಳ ನಿಲುವುಗಳು : ಅಧ್ಯಯನದ ಹಾದಿಯಲ್ಲಿ ಸಾಗುವಾಗ ನಮಗೆ ಈ ಹಿಂದಿನ ಅಧ್ಯಯನಕಾರರ ನಿಲುವು ಮತ್ತು ವಿಶ್ಲೇಷಣೆಗಳು ಪದೇ ಪದೇ ಎದುರಾಗುತ್ತವೆ. ಅವುಗಳನ್ನು ನಿರಾಕರಿಸಬೇಕಾಗಿಲ್ಲ. ಹಾಗೆಯೇ ನಮ್ಮದೇ ಪರಿಶೀಲನೆ ಇಲ್ಲದೆ ಆ ನಿಲುವುಗಳನ್ನು ಮನರುಕ್ತಗೊಳಿಸಿದರೂ ಹೆಚ್ಚಿನ ಉಪಯೋಗವಾಗುವುದಿಲ್ಲ. ಈ ಹಿಂದಿನವರು ಏನು ಹೇಳಿದ್ದಾರೆ ಎಂಬುದು ನಮ್ಮ ಅಧ್ಯಯನವನ್ನು ಪರಿಶೀಲಿಸಲು ಒಂದು ಒರೆಗಲ್ಲು. ಅದರಂತೆಯೇ ಹೊಸ ಸತ್ಯಾಂಶಗಳನ್ನು ಹುಡುಕುವುದಕ್ಕೆ ಒದಗುವ ತಳಹದಿ.
ನಮಗಿಂತ ಮೊದಲೇ ಆ ಕ್ಷೇತ್ರದಲ್ಲಿ ಅಧ್ಯಯನ ಮಾಡಿರುವ ಹಿರಿಯರ ಬರಹಗಳನ್ನು ಗಮನವಿಟ್ಟು ಓದುವುದು, ಅದರ ಬಗ್ಗೆ ಅವರ ವಿಶ್ಲೇಷಣೆಯನ್ನು ಗ್ರಹಿಸುವುದು ಈ ದಿಸೆಯಲ್ಲಿ ಅಗತ್ಯ. ಅವರ ನಿಲುವು, ನಿರ್ಣಯಗಳು ನಮ್ಮ ಅಭಿಪ್ರಾಯಕ್ಕೆ ಪೂರಕವಾಗಿಲ್ಲದಿರಬಹುದು. ಅವು ಸಮಗ್ರ ಎಂದು ಕಾಣಿಸದೆ ಹೋಗಬಹುದು. ಹಾಗನಿಸಲು ಕಾರಣ ನಾವು ನಿಂತಿರುವ ಸಂದರ್ಭ. ನಮ್ಮ ಸಂದರ್ಭಕ್ಕೆ ಅವು ಸೂಕ್ತವಾಗಿಲ್ಲ ಎನಿಸಿದರೂ, ಆ ಅಧ್ಯಯನಗಳ ಮಹತ್ವವನ್ನು ನಾವು ಅಲ್ಲಗಳೆಯಬೇಕಾಗಿಲ್ಲ. ಅವರ ಅಭಿಪ್ರಾಯದ ಬಗ್ಗೆ ಇರುವ ನಮ್ಮ ಭಿನ್ನಮತವನ್ನು ಗುರುತಿಸಲು ಅವರು ಈವರೆಗೆ ನಡೆಸಿರುವ ಅಧ್ಯಯನ ಮಹತ್ತರ ಸಹಕಾರ ನೀಡುತ್ತದೆ. ಹಾಗೆಯೇ ಯಾವ ದಾರಿಯಲ್ಲಿ ಹೋಗಬಾರದು ಎಂಬುದನ್ನು ತಿಳಿಸುವ ಮಟ್ಟಿಗಾದರೂ ಅವು ನಮಗೆ ನೆರವು ನೀಡಿ, ಆ ಪ್ರಮಾಣದ ಶ್ರಮವನ್ನು ಕಡಿಮೆ ಮಾಡುತ್ತವೆ.
ಈಗಾಗಲೇ ನಡೆದಿರುವ ಸಂಶೋಧನೆ ಅಥವಾ ಅಧ್ಯಯನಕ್ಕೆ ಪೂರಕವಾದ ಕೆಲವು ನಿರ್ಣಯಗಳಿಗೆ ನಾವು ತಲುಪಿದ ಪಕ್ಷದಲ್ಲಿ, ಇದು ಈ ಮೊದಲೇ ಇಂತಹವರಿಂದ ಹೀಗೆ ರಚಿಸಲ್ಪಟ್ಟಿತ್ತು, ಆ ಬಗ್ಗೆ ನನಗೆ ಸಹಮತವಿದೆ. ಆ ಮಾಹಿತಿಗಾಗಿ ನಾನು ಋಣಿಯಾಗಿದ್ದೇನೆ ಎಂದು ಸೂಚಿಸುವಲ್ಲಿ ಯಾವುದೇ ಜಿಮಣತನ ಇರುವುದು ಸರಿಯಲ್ಲ.
11. ಸನ್ನಿವೇಶದ ಕೊಡುಗೆ : ಅಧ್ಯಯನ ಅಥವಾ ಸಂಶೋಧನೆ ಒಬ್ಬ ವ್ಯಕ್ತಿ ಅಥವಾ ಒಂದು ವಿದ್ವಾಂಸ ವಲಯದಿಂದ ನಡೆದು ಪ್ರಕಟಗೊಂಡಿರಬಹುದು. ಆದರೆ ಅದರಲ್ಲಿ ಸಾಮಾಜಿಕ ಸಂದರ್ಭವೊಂದರ ಪರೋಕ್ಷ ಪಾಲುದಾರಿಕೆ ಇದೆ ಎಂಬ ಅಂಶವನ್ನು ನಾವು ಗಮನದಲ್ಲಿಟ್ಟಿರಬೇಕು. ಇದು ನಮ್ಮದೇ ಸಾಧನೆಯಲ್ಲ. ಆ ಸನ್ನಿವೇಶ ಏರ್ಪಡಿಸಿದ ಒತ್ತಡಗಳನ್ನು ನಾವು ಆವಾಹಿಸಿಕೊಂಡು, ನಮ್ಮ ಮೂಲಕವಾಗಿ ಅದು ವ್ಯಕ್ತಗೊಂಡಿತೇ ಹೊರತು ಇದು ವ್ಯಕ್ತಿಗತ ಸಾಧನೆಯ ಮಾತಲ್ಲ.
ವಿದ್ವಾಂಸ ಒಂದು ಸಮಾಜದ ನಿರ್ಮಾಣ. ಹಾಗಾಗಿ ವಿದ್ವತ್ತು ಯಾರೊಬ್ಬರ ಖಾಸಗಿ ಸ್ವತ್ತಲ್ಲ. ಅದು ಎಲ್ಲರಿಂದ ಬಂದು, ಎಲ್ಲರಿಗಾಗಿ ಅಭಿವ್ಯಕ್ತಗೊಳ್ಳುವ ಒಂದು ಬೌದ್ಧಿಕ ಪ್ರಕ್ರಿಯೆ. ಈ ಮನೋಭಾವವನ್ನು ಅಂತರ್ಗತ ಮಾಡಿಕೊಂಡು ಮುಂದುವರಿಯುವುದು ಎಲ್ಲರಿಗೂ ಬೇಕಾದ ಒಂದು ಸಂಸ್ಕಾರ. ಯಾವುದೇ ವಿದ್ವಾಂಸ ಅಥವಾ ಸೃಜನಶೀಲ ವ್ಯಕ್ತಿ ಸ್ವಯಂಭು’ ಆದವನಲ್ಲ. ಅದು ಹುಸಿ ಅಹಂಕಾರ. ಬೌದ್ಧಿಕ ಸಾಧನೆಗಳೆಲ್ಲ ಒಬ್ಬ ವ್ಯಕ್ತಿಯನ್ನು ಮಾಧ್ಯಮ’ವಾಗಿಸಿಕೊಂಡು ವ್ಯಕ್ತಗೊಂಡಿರಬಹುದು. ಆದರೆ ಅದು ವ್ಯಕ್ತಿಗತವಾದದ್ದಲ್ಲ. ಬೌದ್ಧಿಕ ವಲಯದಲ್ಲಿರುವ ವ್ಯಕ್ತಿಪ್ರತಿಷ್ಠೆ’ಯ ಸಂಘರ್ಷಗಳಿಗೆ, ಮುನಿಸುಗಳಿಗೆ ಮುಖ್ಯವಾದ ಕಾರಣ ಸಾಧನೆಯನ್ನು ಸ್ವಂತದ್ದು ಎಂದು ಭಾವಿಸುತ್ತಾ ಅದನ್ನು ತಮ್ಮ ವ್ಯಕ್ತಿತ್ವದ ವಿಶಿಷ್ಟತೆಗೆ ಆರೋಪಿಸಿಕೊಳ್ಳುವ ಧೋರಣೆ, ಅದನ್ನು ಸೂಕ್ತವಾದ ಪರಿಶೀಲನೆಯಿಂದ ಸಂಸ್ಕರಿಸಿಕೊಳ್ಳಬೇಕು.
12. ವರ್ತಮಾನದೊಂದಿಗೆ ಸಾಹಚರ್ಯ : ವರ್ತಮಾನದ ವಿದ್ಯಮಾನಗಳಲ್ಲಿ ಆಸಕ್ತಿ ಹಾಗೂ ಸಾಧ್ಯವಾದಷ್ಟು ಸಕ್ರಿಯ ಪಾಲ್ಗೊಳ್ಳುವಿಕೆ ಎಂಬುದು ಕೂಡ ನಮ್ಮ ಅಧ್ಯಯನದ ಸಾಮರ್ಥ್ಯ ಹಾಗೂ ಸಾಧ್ಯತೆಗಳನ್ನು ವಿಸ್ತರಿಸಿಕೊಳ್ಳುವ ಒಂದು ವಿಧಾನ. ವಿದ್ವಾಂಸ ಹಾಗೂ ಅಧ್ಯಯನಕಾರ ಲೋಕದ ವಿದ್ಯಮಾನಗಳಿಗೆ ಕಣ್ಣು ತಿರುಗಿಸಿ ಅಥವಾ ತೇಲಿಸಿ ನಡೆಯುವುದು ಕೆಲವರಲ್ಲಿ ಒಂದು ರಿವಾಜಿನಂತೆ ಚಾಲ್ತಿಯಲ್ಲಿದೆ. ಲೋಕ ವಿದ್ಯಮಾನಗಳಿಗೆ ಆಸಕ್ತಿ ತೋರಿಸುವವನು ತನ್ನ ಅಧ್ಯಯನ ಕ್ಷೇತ್ರದಲ್ಲಿ ಆಳವಾದ ಪಾಂಡಿತ್ಯ ಸಂಪಾದಿಸಲು ಸಾಧ್ಯವಿಲ್ಲ ಎಂಬಂತಹ ತಪ್ಪು ತಿಳಿವಳಿಕೆಯೊಂದು ಕೂಡ ಚಾಲ್ತಿಯಲ್ಲಿದ್ದಂತಿದೆ.
ಜ್ಞಾನಿಯಾದವರು ವರ್ತಮಾನದ ವಿದ್ಯಮಾನಗಳಿಗೆ, ದೈನಿಕಗಳಿಗೆ ಹೊರತಾಗಿರುವುದಿಲ್ಲ. ಆದರೆ ಅವುಗಳಿಗೇ ಅಂಟಿಕೊಂಡಿರುವುದಿಲ್ಲ. ಆತನ ಜ್ಞಾನಾಸಕ್ತಿ ದೈನಿಕ ಲಾಭಾಪೇಕ್ಷೆಗಳಿಂದ ಪ್ರೇರಿತಗೊಳ್ಳಬಾರದೇ ಹೊರತು, ಆತ ದೈನಿಕ ವಿದ್ಯಮಾನಗಳಿಂದ ದೂರವಿರಬೇಕೆಂದಿಲ್ಲ. ಈ ಸೂಕ್ಷ್ಮವನ್ನು ಮೈಗೂಡಿಸಿಕೊಂಡು ಪ್ರಚಲಿತ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ವಿದ್ಯಮಾನಗಳ ಜೊತೆ ಸಂಪರ್ಕ ಹೊಂದಿರುವುದು ಅವಶ್ಯಕ.
ಆ ಸಂದರ್ಭದಲ್ಲಿ ಗೌತಮ ಬುದ್ಧನ ನಿಲುವು ನನಗೆ ನೆನಪಾಗುತ್ತದೆ. ಪರಲೋಕ, ದೇವರ ಅಸ್ತಿತ್ವ, ಆತ್ಮ ಈ ಕುರಿತ ಪ್ರಶ್ನೆಗಳಿಗೆ ಆತ ಉತ್ತರಿಸಲು ನಿರಾಕರಿಸುತ್ತಾ “ನಾನು ಈ ಲೋಕದಲ್ಲಿ ಯಾಕೆ ಇಷ್ಟು ದುಃಖ ದಾರಿದ್ರ ತುಂಬಿದೆ? ಅವುಗಳಿಗೆ ಪರಿಹಾರವೇನು? ಎಂಬ ಬಗ್ಗೆ ಯೋಚಿಸುತ್ತಿದ್ದೇನೆ.” ಎಂದು ಹೇಳಿದ್ದ.
ನಮ್ಮ ಅಧ್ಯಯನ, ಸಂಶೋಧನೆಗಳು ವರ್ತಮಾನದ ಬಿಕ್ಕಟ್ಟುಗಳಿಗೆ ಸ್ಪಂದಿಸುವ ಗುಣ ಹೊಂದಿರಬೇಕಾದುದು ಒಂದು ಅರ್ಥಪೂರ್ಣತ.
13. ನಿತ್ಯ ಪರಿವರ್ತನೆಯ ಬಗ್ಗೆ ಎಚ್ಚರ : ಮನುಷ್ಯರ ಸ್ವಭಾವ, ಸಂಸ್ಕೃತಿ ಹಾಗೂ ಪರಿಸ್ಥಿತಿಗಳು ಸದಾ ಬದಲಾಗುತ್ತಿರುವಂತಹ ಒಂದು ಗುಣವನ್ನು ಹೊಂದಿರುವುದರಿಂದ ಈ ಚಲನಶೀಲತೆಯನ್ನು ಗಮನದಲ್ಲಿಟ್ಟುಕೊಂಡು ಅಧ್ಯಯನ ಅಥವಾ ಸಂಶೋಧನೆಯನ್ನು ನಾವು ಪದೇ ಪದೇ ಸರಿಮಾಡಿಕೊಳ್ಳುತ್ತಾ ಇರಬೇಕಾಗುತ್ತದೆ. ಕ್ರಿಸ್ಟೋಫರ್ ಕಾಡ್‌ವೆಲ್ ಸ್ಟಡೀಸ್ ಇನ್ ಎ ಡೈಯಿಂಗ್ ಕಲ್ಟರ್’ ಎನ್ನುವ ಕೃತಿಯನ್ನು ಬರೆದ. ಆದರೆ ಕೆಲವು ವರ್ಷಗಳ ನಂತರ ಆತ ಅದೇ ಅಮೆರಿಕಾ ಸಂಸ್ಕೃತಿಯ ಬಗ್ಗೆ ಫರ್ದರ್ ಸ್ಟಡೀಸ್ ಇನ್ ಎ ಡೈಯಿಂಗ್ ಕಲ್ಟರ್’ ಎಂಬ ಕೃತಿ ಬರೆದ. ಸಂಸ್ಕೃತಿ ಕ್ಷೇತ್ರದ ಅಧ್ಯಯನಗಳಲ್ಲಿ ಈ ಪರಿಪಾಠವನ್ನು ನಾವು ರೂಢಿಸಿಕೊಳ್ಳಬೇಕೆನಿಸುತ್ತದೆ.
ಒಂದು ನದಿಯಲ್ಲಿ ಹರಿವ ನೀರನ್ನು ಒಂದು ಸಲ ಮಾತ್ರ ಕುಡಿಯಲು ಸಾಧ್ಯ ಎನ್ನುತ್ತದೆ ದರ್ಶನವೊಂದು. ಅಂದರೆ ಎರಡನೇ ಸಲ ಕುಡಿಯಲು ಬೊಗಸೆ ತುಂಬುವಾಗ ಮೊದಲ ನೀರು ಹೊರಟು ಹೋಗಿರುತ್ತದೆ. ಹೊಸ ನೀರು ಬಂದಿರುತ್ತದೆ. ಸಂಸ್ಕೃತಿ ಕ್ಷೇತ್ರದಲ್ಲಿ ಕೆಲಸ ಮಾಡುವಾಗ ಈ ರೂಪಕಾತ್ಮಕ ದರ್ಶನ ನಮ್ಮನ್ನು ಎಚ್ಚರಿಸುತ್ತಿರಬೇಕು. ಜೀವನ ನಿತ್ಯ ಬದಲಾಗುವ ಪ್ರವೃತ್ತಿಯುಳ್ಳದ್ದಾದ್ದರಿಂದ ಆ ಕುರಿತು ಶಾಶ್ವತ ನಿರ್ಣಯಗಳನ್ನು ತಳೆಯುವುದು ಕಷ್ಟ.
ಹರಿವ ನದಿಗೆ ದಂಡೆಗಳು ಶಾಶ್ವತವಾಗಿರುವಂತೆ ತೋರುತ್ತವೆ. ಆದರೆ ಅವೂ ಕೂಡ ದಿನವೂ ಸ್ವಲ್ಪ ಸ್ವಲ್ಪವೇ ಬದಲಿ, ಕಾಲಾಂತರದಲ್ಲಿ ನದಿ ಪಾತ್ರ ಬದಲಿದ್ದು ಗೋಚರವಾಗುತ್ತದೆ. ಹಾಗೆ ಸಂಸ್ಕೃತಿಯ ವಿಧಾನಗಳು, ಪದ್ಧತಿಗಳು, ಪ್ರಕಾರಗಳು ತಮ್ಮ ‘ಪಾತ್ರ’ದಲ್ಲಿ ಸ್ಥಿರವೆಂಬಂತೆ ಕಂಡು ಅದರೊಳಗೆ ಹರಿಯುವ ಜೀವನದ ನೀರು ಮಾತ್ರ ಬದಲಿದೆ ಎಂಬ ‘ಶಾಶ್ವತ’ ನೆಲೆಯ ಕಲ್ಪನೆಗಳು ನಮ್ಮನ್ನು ಹಿಡಿದಿಡಬಾರದು. ನಿಚ್ಚಂ ಪೊಸತು’ ಎಂಬಷ್ಟು ಪ್ರಫುಲ್ಲ ಮನಸ್ಸಿನಿಂದ, ನಾನು ಇದೀಗ ತಾನೇ ಇದನ್ನು ನೋಡುತ್ತಿದ್ದೇನೆ ಎಂಬ ಶಿಶು ಸಹಜ ಕುತೂಹಲದಿಂದ ವಿದ್ಯಮಾನಗಳನ್ನು ಗಮನಿಸುವುದಕ್ಕೆ ಬೇಕಾದ ಚೈತನ್ಯವನ್ನು ಅಧ್ಯಯನಕಾರ ರೂಢಿಸಿಕೊಳ್ಳಬೇಕಾಗುತ್ತದೆ.
14. ಪೂರ್ವಗ್ರಹಗಳಿಂದ ಮುಕ್ತವಾದ ಮನಸ್ಸು : ಪೂರ್ವಗ್ರಹ ನಿಲುವುಗಳ ನೆಲೆಯಿಂದ ನಾವು ಅಧ್ಯಯನವನ್ನು ಕೈಗೊಂಡರೆ, ಪೂರ್ವನಿರ್ಣಿತ ಸತ್ಯಗಳು ಮಾತ್ರ ದೊರೆಯುತ್ತವೆ. ಈಗಾಗಲೇ ಸಿದ್ಧವಿರುವ ನಿರ್ಣಯಗಳನ್ನೇ ನಾವು ಮಂಡಿಸುವುದಾದರೆ ನಾವು ಅಧ್ಯಯನ ಯಾಕೆ ಕೈಗೊಳ್ಳಬೇಕು? ನಮ್ಮ ಬಳಿ ಈಗಾಗಲೇ ಇರುವ ನಿಲುವುಗಳು ನಮಗೆ ಹೆಜ್ಜೆ ಮುಂದೆ ಎತ್ತಿಡಲು ಆಧಾರವೊದಗಿಸುವ ನೆಲದಂತಿರಬೇಕೇ ಹೊರತು, ಪಾದವನ್ನು ಬೆಸುಗೆ ಹಾಕಿಟ್ಟುಕೊಂಡ ಪೀಠದಂತಲ್ಲ. ಅಧ್ಯಯನದ ಫಲಿತಾಂಶ ಏನೆಂಬುದನ್ನು ಆಧರಿಸಿ ನಮ್ಮ ನಿಲುವುಗಳನ್ನು ಮನ ಪರಿಶೀಲಿಸಿ ಮುಂದುವರಿಯುವುದಕ್ಕೆ ಬೇಕಾದ ಸೈರ್ಯವನ್ನು ಒಬ್ಬ ಅಧ್ಯಯನಕಾರ ಹೊಂದಿರುವುದು ಅವಶ್ಯ.
15. ಮಾದರಿ : ಈ ಲೇಖನದಲ್ಲಿ ಉಲ್ಲೇಖಿಸಲಾದ ಧೋರಣೆಗಳು, ಕ್ರಮಗಳೆಲ್ಲವನ್ನೂ ಪರಿಪೂರ್ಣವಾಗಿ
ಅಳವಡಿಸಿಕೊಂಡಾದ ಮೇಲೆಯೇ ಅಧ್ಯಯನ ಅಥವಾ ಸಂಶೋಧನೆಯನ್ನು ಆರಂಭಿಸುತ್ತೇವೆಂಬ ಹಠ ಇಟ್ಟುಕೊಳ್ಳಬೇಕಾಗಿಯೂ ಇಲ್ಲ. ಇವೆಲ್ಲ ಕ್ರಮವಾಗಿ ಅನುಭವಪೂರ್ವಕವಾಗಿ ಮೈಗೂಡಿಸಿಕೊಳ್ಳುತ್ತಾ ಮುನ್ನಡೆಯಬೇಕಾದ ಗುಣಾಂಶಗಳು. ಏನನ್ನಾದರೂ ಅಧ್ಯಯನ ಮಾಡುತ್ತಾ, ಅದರ ಸರಿ ತಪ್ಪು ತಿದ್ದಿಕೊಳ್ಳುತ್ತಾ… ತಿದ್ದಿಕೊಳ್ಳುತ್ತಾ… ಎಷ್ಟಾದರೂ ಕಲಿಕೆಗೆ ಪ್ರಾಯೋಗಿಕ ಜ್ಞಾನವೇ ಬಹಳ ದೊಡ್ಡ ಪಾಠಶಾಲೆ. ಈ ಬಗೆಯ ಉತ್ತಮ ಗುಣಗಳು ಕಂಡುಬಂದಿರುವ ಲೇಖಕರ ಕೃತಿಗಳನ್ನು ಹೆಚ್ಚು ಹೆಚ್ಚಾಗಿ ಅಧ್ಯಯನ ಮಾಡುವುದು ನಮ್ಮ ಅಧ್ಯಯನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಇರುವ ಒಂದು ಮಾರ್ಗ,
(ಕನ್ನಡ ಅಧ್ಯಯನ, ತ್ರೈಮಾಸಿಕ-ಕನ್ನಡ ವಿವಿ ಹಂಪಿ ಜನವರಿ – ಜೂನ್ 2007)