ನಮ್ಮ ಮನೆಯಲ್ಲಿರುವ ಹಲವಾರು ಬುದ್ಧ ಪ್ರತಿಮೆಗಳನ್ನು ನೋಡಿದಾಗಲೆಲ್ಲಾ ಇಷ್ಟು ಮಾಟವಾದ ಬುದ್ಧನನ್ನು ಪರಿಕಲ್ಪನೆ ಮಾಡಿದ ಮೊದಲ ಕಲಾವಿದ, ಶಿಲ್ಪಿ ಯಾರಿರಬಹುದು ಎಂಬ ಪ್ರಶ್ನೆ ಹುಟ್ಟುತ್ತದೆ ನನಗೆ. ಗಾಂಧಾರ ಶೈಲಿಯ ಬುದ್ಧ ನನಗೆ ಹೆಚ್ಚು ಇಷ್ಟವಾಗುವ ಪ್ರತಿಮೆ. ಭೂತಾನ್ ಶೈಲಿ, ಜಪಾನ್ ಶೈಲಿ, ಟಿಬೆಟ್ ಶೈಲಿಯ ಬುದ್ಧರು ನನಗ್ಯಾಕೋ ಮನಸ್ಸಿಗಿಳಿಯುವುದಿಲ್ಲ. ಇಂಡಿಡ್ ತಳಿಯ ಮುಖಲಕ್ಷಣಗಳು ನನಗೆ ಹೆಚ್ಚು ಪರಿಚಿತ ಎನ್ನುವ ಕಾರಣಕ್ಕೆ ಆ ಜನಾಂಗೀಯ ಲಕ್ಷಣಗಳ ಬುದ್ಧ ನನ್ನ ಮನಸ್ಸಿನಲ್ಲಿ ನಿಂತಿರಬೇಕು. ನಿಶಬ್ದ ವಾತಾವರಣವಿದ್ದು, ಗಾಳಿ ಬೆಳಕು ಚೆನ್ನಾಗಿರುವ ಶುಭ್ರ ಸ್ಥಳವೊಂದರ ಏಕಾಂತದಲ್ಲಿ ಬುದ್ಧ ಪ್ರತಿಮೆ ಕಂಡರೆ ಅದರ ಮುಂದೆ ಸುಮ್ಮನೆ ಕೂರಬೇಕೆನಿಸುತ್ತದೆ. ಹಾಗೆ ಕೂರುತ್ತೇನೆ ಕೂಡ. ಹಾಗೆ ಕೂತು ಮೌನವಾಗಿ ಬುದ್ಧನನ್ನು ನೋಡುತ್ತಾ ಇದ್ದರೆ ರಸಾನಂದ ಹಾಗೂ ಪ್ರಶಾಂತ ಭಾವಗಳು ಅದರ ಗಾಂಭೀರ್ಯದೊಂದಿಗೆ ನನ್ನೊಳಗೆ ನೆಲೆಸತೊಡಗುತ್ತವೆ. ಆದರೆ ಮನಸ್ಸಿನ ಮರ್ಕಟ ಮಂಥನದ ಚಟ ಕಲಿತಿದೆ. ಮತ್ತೇನನ್ನೋ ಮಥಿಸತೊಡಗುತ್ತದೆ. ಪ್ರಶಾಂತಿಯೆಂಬುದು ಒಂದೇ ಒಂದು ಗಳಿಗೆಯ ಭಾವ ನನ್ನೊಳಗೆ. ಮತ್ತೆ ನಾನು ಅಶಾಂತ. ಆದರೆ ಬುದ್ಧನ ನಗೆಯೊಳಗೆ, ಮೌನ ಮುದ್ರೆಯೊಳಗೆ, ನಿಮೀಲಿತ ನೇತ್ರಗಳೊಳಗೆ ಅದೊಂದು ಅಚಲ ಸಮುದ್ರ. ಅಲೆಗಳ ಚಲನೆಯೂ ನಿಂತರೆ ಸಾಗರದ ನೀಲ ನೀರು ಹೇಗಿರಬಹುದೋ ಹಾಗೆ ಕಾಣುತ್ತದೆ ಬುದ್ಧನ ಮುಖಮುದ್ರೆ.
ಪ್ರಪಂಚದಲ್ಲಿ ಮಾರಾಟಗೊಳ್ಳುವ ಪ್ರತಿಮೆಗಳಲ್ಲಿ ಬುದ್ಧ ಪ್ರತಿಮೆಗಳ ಸಂಖ್ಯೆಯೇ ಹೆಚ್ಚು ಎಂಬ ಸುದ್ದಿ ಓದಿದೆ. ಇದು ನಿಜವಾಗಿರಬಹುದು. ಆಫ್ರಿಕಾ ಖಂಡದಲ್ಲಿ, ಯೂರೋಪ್ ಖಂಡದಲ್ಲಿ ಹೇಗೋ ಗೊತ್ತಿಲ್ಲ. ಲ್ಯಾಟಿನ್ ಅಮೇರಿಕಾದಲ್ಲಿ ಬುದ್ಧ ಪ್ರತಿಮೆಗಳಿರುವ ಸಂಭವ ಕಡಿಮೆ. ಆದರೆ ಏಷ್ಯಾ ಮಟ್ಟಿಗೆ ಹಾಗೂ ಒಂದು ಕಲಾಭಿರುಚಿಯ ಅಂಗವಾಗಿ ಒಂದು ಮಟ್ಟಿಗೆ ಇತರೆ ಭೂ ಖಂಡಗಳಲ್ಲಿ ಬುದ್ಧ ಪ್ರತಿಮೆಗೆ ಅಪಾರವಾದ ಮನ್ನಣೆ ಇದೆ. ಬುದ್ಧ ಬೌದ್ಧಧರ್ಮದ ನೇರ ಪ್ರತೀಕವಾಗಿ ಕಾಣದೆ, ಧರ್ಮಾತೀತ ಪ್ರಬುದ್ಧತೆಯ, ಜ್ಞಾನೋದಯದ, ಪ್ರಶಾಂತತೆಯ, ಗಂಭೀರವಾದ ಆದರೆ ಕಾಠಿಣ್ಯತೆಯಿಲ್ಲದ ಒಂದು ಧ್ಯಾನ ಮುದ್ರೆಯಾಗಿ ಮನಸ್ಸಿನಲ್ಲಿ ನಿಲ್ಲುತ್ತಾನೆ. ಹಾಗಾಗಿ ಬುದ್ಧ ಮೂರ್ತಿ ಕೊಳ್ಳುವಾಗ ಇತರ ಧರ್ಮಗಳವರಿಗೆ ತಮ್ಮ ಧರ್ಮವನ್ನು ಉಲ್ಲಂಘಿಸಿದ ಭಾವನೆ ಬರುವುದಿಲ್ಲ ಎಂದುಕೊಳ್ಳುತ್ತೇನೆ. ಮುಸ್ಲಿಂ ಸಮುದಾಯದವರು ಯಾವ ಮೂರ್ತಿಗಳನ್ನೂ ಇಟ್ಟುಕೊಳ್ಳುವವರಲ್ಲ. ಆದ್ದರಿಂದ ಬಹುಶಃ ಬುದ್ಧನೂ ಸೇರಿದಂತೆ ಬೇರೆ ಯಾವುದೇ ಪ್ರತಿಮೆಗಳನ್ನು ಅವರು ಕೊಳ್ಳುವುದಿಲ್ಲ. ಅದು ಬೇರೆ ವಿಷಯ.
ಬುದ್ಧ ಪ್ರತಿಮೆಗೆ ಇರುವ ಬೇಡಿಕೆ ಮತ್ತು ಮನ್ನಣೆಗೆ ಕಾರಣವೇನಿರಬಹುದು? ಬುದ್ಧ ಮಾರ್ಗದ ಬಗ್ಗೆ ಹೆಚ್ಚು ಅಭಿಮಾನ ಮೂಡುತ್ತಿರುವುದು ಒಂದು ಕಾರಣ. ಬುದ್ಧ ಧರ್ಮಿಯಾದವನಿಗೆ ತನ್ನ ಸಾಂಸ್ಕೃತಿಕ ಚಹರೆಗಳನ್ನು ಬದಲಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಭಿಕ್ಕುಗಳಿಗೆ ಬಿಟ್ಟರೆ ಬೇರೆ ಯಾರಿಗೂ ನಿರ್ಧಿಷ್ಟ ಉಡುಪು ಸಂಹಿತೆಯಾಗಲೀ, ಆಹಾರ ಸಂಹಿತೆಯಾಗಲೀ, ಲಾಂಛನಗಳ ಧಾರಣೆಯಾಗಲೀ ನಿರ್ದಿಷ್ಟಗೊಂಡಿಲ್ಲ. ನೀನಿರುವ ಹಾಗೆಯೇ ಇರಬಹುದು. ಬೌದ್ಧ ಧರ್ಮಕ್ಕೆ ಮೀಸಲಾದ ನಾಮಸಂಹಿತೆಯೆಂಬುದು ಇಲ್ಲ. ಪ್ರತಿಯೊಂದೂ ಸ್ಥಳ, ಸನ್ನಿವೇಶ ಅವಲಂಬಿತ. ಹೀಗಾಗಿ ಬುದ್ಧಮಾರ್ಗ ಹೇರಿಕೆಯೆನಿಸುವುದು, ತೋರಿಕೆಯೆನಿಸುವುದು ಕಷ್ಟ.
ಬೌದ್ಧ ಧರ್ಮಕ್ಕೆ ಒಂದು ಭಾಷೆಯಿಲ್ಲ. ಬುದ್ಧ ತನ್ನ ಕಾಲದಲ್ಲಿ ಜನ ಸಾಮಾನ್ಯರು ಮಾತನಾಡುತ್ತಿದ್ದ ಪಾಳಿ, ಪ್ರಾಕೃತಗಳಲ್ಲಿ ತನ್ನ ಬೋಧನೆಗಳನ್ನು ಪ್ರಸಾರ ಮಾಡಿದ. ಆದರೆ ಅದು ಪವಿತ್ರ ಭಾಷೆಯೆಂದು ಪ್ರತಿಪಾದಿಸಲಿಲ್ಲ. ಟಿಬೆಟ್, ಚೀನಾ, ಜಪಾನ್, ಥೈಲ್ಯಾಂಡ್ ಮುಂತಾದ ಎಲ್ಲ ಸಂಸ್ಕೃತಿಗಳು ಬುದ್ಧ ಬೋಧನೆಗಳನ್ನು ತಮ್ಮ ಭಾಷೆಗಳಲ್ಲಿಯೇ ಪ್ರಚಲಿತಗೊಳಿಸಿಕೊಂಡಿವೆ. ಇತ್ತೀಚೆಗೆ ಭಾರತದಲ್ಲಿ ಬೋಧಿ ಸಂಘಗಳಲ್ಲಿ “ನಮೋತಸ್ಸ” ಎಂಬಂತಹ ಭಾಷಾ ಬಳಕೆಗಳು ಬುದ್ಧನಿಗೆ ಗೌರವ ಸಲ್ಲಿಸುವಾಗ, ಮದುವೆ ಮಾಡಿಸುವಾಗ ಪಾಳಿ ಭಾಷಾ ಶ್ಲೋಕಗಳನ್ನು ಹೇಳುವ ಅಭ್ಯಾಸ ಬೆಳೆಯುತ್ತಿವೆ. ಅವನ್ನೆಲ್ಲ ಕವಿ ಪ್ರತಿಭೆಯುಳ್ಳವರು ಅಷ್ಟೇ ಛಂದೋಬದ್ಧವಾಗಿ ಕನ್ನಡದಲ್ಲಿ ಅನುವಾದ ಮಾಡಿ ಅವುಗಳನ್ನು ಬಳಸಬೇಕು ಎಂಬುದು ನನ್ನ ಅಭಿಪ್ರಾಯ. ಇದು ತೆಲುಗಿನಲ್ಲೂ ಆಗಬೇಕು, ತಮಿಳಿನಲ್ಲೂ ಆಗಬೇಕು. ಪುರೋಹಿತಶಾಹಿಯು ಜನರಿಗೆ ತಿಳಿಯದ ಭಾಷೆಯ ಮೇಲೆ ತನ್ನ ಪ್ರಭುತ್ವ ಸಾಧಿಸಿಕೊಂಡು ಅದಕ್ಕೆ ದೇವಭಾಷೆಯ ಹಿರಿಮೆ ಹಚ್ಚಿ ಅದನ್ನೇ ಧಾರ್ಮಿಕ ವಿಧಿಗಳ ಅಧಿಕೃತ ಮಾಧ್ಯಮವನ್ನಾಗಿ ಮಾಡಿರುವುದು ಹಿಂದೂ ಧರ್ಮದಲ್ಲಿದೆ.
ಈಗಿನ ಕೆಲವು ಭಿಕ್ಕುಗಳು, ಬೋಧಿ ಸಂಘಗಳು ಅದನ್ನೇ ಅನುಸರಿಸುತ್ತಿರುವಂತಿವೆ. ಇದು ಮತ್ತೊಂದು ಮಠೀಕೃತ ಧರ್ಮವನ್ನು ಪೋಷಿಸುತ್ತದೆ. ಬುದ್ಧ ಕರ್ನಾಟಕದಲ್ಲಿ ಹುಟ್ಟಿದ್ದರೆ ಕನ್ನಡದಲ್ಲೇ ಬೋಧಿಸಿರುತ್ತಿದ್ದ, ಖಂಡಿತ ಪಾಳಿ ಬಳಸುತ್ತಿರಲಿಲ್ಲ. ಬುದ್ಧನ ಮಾತು ಮಾಗಧಿಯೋ ಅರ್ಧ ಮಾಗಧಿಯೋ ಬಲ್ಲವರು ಯಾರು? ಪಿಟಿಕಗಳು ಲಿಖಿತಗೊಳ್ಳುವಾಗ ಪಾಳಿಯಲ್ಲಿ ಲಿಪೀಕರಣಗೊಂಡವು. ಅದು ಆಗಿನ ಜನಸಾಮಾನ್ಯರ ಭಾಷೆಯಾಗಿತ್ತು. ಜನ ತಮ್ಮ ನುಡಿಯಲ್ಲಿ ‘ಧಮ್ಮ’ಎಂದಿದ್ದನ್ನು ಪಾಳಿ ಪಿಟಿಕಗಳು ‘ಧರ್ಮ’ ಎನ್ನಲಿಲ್ಲ. ಹಾಗೆ ಭಾಷಿಕವಾಗಿ ಅನ್ಯೀಕರಿಸುವುದರಿಂದಲೇ ಒಂದು ಜನಧರ್ಮ ಮಠೀಯ ಧರ್ಮವಾಗಿ ಪುರೋಹಿತರ ಹಿತ ಕಾಯುವ ಸಾಧನವಾಗಿ ಮಾರ್ಪಡುತ್ತದೆ. ಜನರ ಕೈಯಿಂದ ಜಾರಿ ಅದು ಪುರೋಹಿತರ ವಲಯಕ್ಕೆ ವಶವಾದ ಕೂಡಲೇ ಪುರೋಹಿತರನ್ನು ಓಲೈಸಿ ಆಳುವ ವರ್ಗ ಅದನ್ನು ತನ್ನ ತಲೆಕಾವಲಿಗೆ ಬಳಸಿಕೊಳ್ಳುತ್ತದೆ. ಧರ್ಮವೆಂಬುದು ಹಾಗೆ ಜನರ ಬೆಳಕಾಗುವುದು ತಪ್ಪಿ ಅವರ ಕಣ್ಣಿಗೆ ಕವಿದುಕೊಳ್ಳುವ ಕತ್ತಲ ತೆರೆಯಾಗುತ್ತದೆ. ಧರ್ಮ ಯಾವ ಯಾವ ಹೆಸರಿನಲ್ಲಿ ಯಾವ ಸಂಕೇತಗಳನ್ನು ಇಟ್ಟುಕೊಂಡಿದೆ ಎಂಬುದರ ಮೇಲೆ ಅದು ಒಳ್ಳೆಯದೋ ಕೆಟ್ಟದ್ದೋ ತೀರ್ಮಾನವಾಗುವುದಿಲ್ಲ. ಅದು ಜನರ ಸಾದಾಸೀದ ಬಳಕೆಯಲ್ಲಿರುವಾಗ ‘ಹೃದಯಹೀನ ಜಗತ್ತಿನ ಹೃದಯ’ದಂತೆ ನೊಂದವರಿಗೆ ಸಾಂತ್ವನದಂತಿರುತ್ತದೆ. ಪುರೋಹಿತರ ಸಾಧನವಾಗಿ ಆಳುವ ಜನರ ತಲೆಕಾವಲಿಗೆ ನಿಂತೊಡನೆ ಅದು ‘ಜನರ ಅಫೀಮು’ಆಗಿಬಿಡುತ್ತದೆ.
ಬುದ್ಧನಿಗೆ ಧರ್ಮ ಕಟ್ಟುವ ಇರಾದೆ ಇರಲಿಲ್ಲ. ಜ್ಞಾನೋದಯಕ್ಕೆ ‘ಮಾರ್ಗ’ಬೋಧಿಸಬೇಕು ಎಂಬುದು ಆತನ ಆಶಯವಾಗಿತ್ತು. ಜಗತ್ತಿಗೆ ತಾನು ಮೋಕ್ಷದಾತನಲ್ಲ ಎಂಬುದನ್ನು ಹೇಳಿದ. ‘ನಿನಗೆ ನೀನೇ ದಾರಿದೀಪ, ನಿನಗೆ ನೀನೇ ಮಾರ್ಗ’ ಎಂದ. ಬುದ್ಧನಿಗೆ ದಾರಿ ತೋರಿಸುವುದು ಗೊತ್ತಿತ್ತು. ಕೈ ಹಿಡಿದು ನಡೆಸುವುದು ಬೇಕಿರಲಿಲ್ಲ. ತಾನು ದೇವರ ಅವತಾರವೋ, ಪ್ರತಿನಿಧಿಯೋ, ಮಗನೋ ಆಗಬೇಕೆಂದಿರಲಿಲ್ಲ. ಪವಾಡಗಳು ಧರ್ಮ ಮಾರ್ಗಕ್ಕೆ ಅತಿದೊಡ್ಡ ಅಡೆತಡೆಗಳು ಎಂದು ಹೇಳಿದ ಬುದ್ಧ. ಪ್ರತಿಯೊಬ್ಬರೂ ಜ್ಞಾನೋದಯಕ್ಕೆ ಅರ್ಹರು ಎಂದು ಆತ ಹೇಳಿದಾಗ ಬುದ್ಧ ಎಂಬುವವನು ಒಬ್ಬನೇ ಇರಬೇಕಿಲ್ಲ ಎಂದೂ ಕೂಡ ಹೇಳಿದಂತೆಯೇ. ಬುದ್ಧರು ಆಗುತ್ತಿರುತ್ತಾರೆ, ಹೋಗುತ್ತಿರುತ್ತಾರೆ. ಈ ಸತ್ಯ ಗೊತ್ತಿದ್ದರಿಂದಲೇ ‘ಝೆನ್’ಪಂಥ ಹುಟ್ಟಿಕೊಂಡಿತು. ಸ್ಥಾವಿರವಾದದ ಮೇಲೆ ತನ್ನ ಚಿಂತನೆಗಳಿಂದ ಬುದ್ಧ ದೊಡ್ಡ ಪ್ರಹಾರ ಮಾಡಿದ. ಆದರೂ ಆತನನ್ನು ಮೂರ್ತಿ ಮಾಡಿದೆವು. ಪ್ರತಿಮೆಯನ್ನು ಮೋಹಿಸಿದೆವು. ಬುದ್ಧನ ಪ್ರತಿಮೆ ಇರಿಸಿಕೊಂಡೊಡನೆ ಬುದ್ಧ ನಮ್ಮೊಳಗೆ ಬರುವುದಿಲ್ಲ. ಬುದ್ಧ ಬರಲಿ ಎಂಬುದೊಂದು ನಿರಂತರ ಹಂಬಲ. ಪ್ರಪಂಚದಲ್ಲಿ ಈ ಹಂಬಲ ಹೆಚ್ಚುತ್ತಿದೆ. ಏಕೆಂದರೆ ಲೋಕದ ತಲ್ಲಣ ವಿಪರೀತವಾಗುತ್ತಿದೆ. ಮನುಕುಲದ ಬಳಿ ಈಗ ಬೇಕಾದಂತಹ ಸಾಧನ ಸೌಭಾಗ್ಯಗಳಿವೆ, ತಾಂತ್ರಿಕ ಉಪಕರಣಗಳಿವೆ. ಮಧ್ಯಮ ವರ್ಗಕ್ಕೆ, ಮೇಲ್ ಮಧ್ಯಮ ವರ್ಗಕ್ಕೆ ಹಣವೂ ಇದೆ. ಭೋಗ ಸಾಧ್ಯತೆಗಳಿವೆ. ಆದರೆ ಅದನ್ನು ಅನುಭವಿಸಲು ಬೇಕಾದ ಮನೋಸಮಾಧಾನವಿಲ್ಲ. ತಳಮಳ ಎನ್ನುವುದು ಸಾರ್ವತ್ರಿಕಗೊಳ್ಳುತ್ತಿರುವುದರಿಂದಲೇ ಈ ವಲಯದಲ್ಲಿ ಬುದ್ಧ ಪ್ರತಿಮೆಯ ಮೋಹ ಕಂಡು ಬರುತ್ತದೆ. ಶೋಷಿತ ಧರ್ಮಗಳ ಜೊತೆ ನಾವಿಲ್ಲ ಎಂದು ತೋರಿಸಿಕೊಳ್ಳಲು ಬುದ್ಧ ಪ್ರತೀಕ ಇಟ್ಟುಕೊಂಡಿರುವವರು ಇರುವ ಹಾಗೆಯೇ, ತಾವು ಸದಾ ಹಂಬಲಿಸುತ್ತಿರುವ, ಆದರೆ ಪಡೆಯಲು ಸಾಧ್ಯವಾಗುತ್ತಿಲ್ಲದ ಮನಃಶಾಂತಿಯ ರೂಪಕವಾಗಿಯೂ ಬುದ್ಧ ಪ್ರತಿಮೆಗಳನ್ನು ಇರಿಸಿಕೊಳ್ಳುವುದು ನಡೆಯುತ್ತಿದೆ. ‘ಆಸೆಯೆ ದುಃಖಕ್ಕೆ ಕಾರಣ’ ಎಂದು ಭಗವಾನ್ ಬುದ್ಧ ಹೇಳಿದ. ಆದರೆ ನಮಗಿರುವ ಆಸೆಗಳೋ ಅಗಣಿತ. ಹಾಗಾಗಿ ಅಶಾಂತಿಯೂ ಅಗಾಧ. ಈ ಚಕ್ರವನ್ನು ಮುರಿಯುವುದಕ್ಕೆ ಬುದ್ಧಮಾರ್ಗ ನಮ್ಮೆಲ್ಲರಿಗೂ ನೆರವಾಗಲಿ.