(ಕವಿ ಸಿದ್ಧಲಿಂಗಯ್ಯನವರು ನಿಧನರಾದಾಗ ಬರೆದ ಬರೆಹ)
ನಾವು ಈ ಕರೊನಾ ಕಾಲಘಟ್ಟದಲ್ಲಿ ಬಹಳ ಮಹತ್ವದ ಹಲವು ವ್ಯಕ್ತಿಗಳನ್ನು ಕಳೆದುಕೊಂಡಿದ್ದೇವೆ. ಅದರಲ್ಲೂ ನಮ್ಮ ಹೋರಾಟಕ್ಕೆ, ಸಾಮಾಜಿಕ ಚಿಂತನೆಗಳಿಗೆ, ನಮ್ಮ ಆಶಯಗಳಿಗೆ ಬಹಳ ನಿಕಟವಾಗಿದ್ದ ಇಬ್ಬರು ವ್ಯಕ್ತಿಗಳನ್ನು ಇತ್ತೀಚಿಗೆ ಕಳೆದುಕೊಂಡಿದ್ದೇವೆ. ಇವರಲ್ಲಿ ಒಬ್ಬರು ಎಚ್. ಎಸ್. ದೊರೆಸ್ವಾಮಿಯವರು. ಇವರು ಗಾಂಧಿವಾದಿಯಾಗಿದ್ದಾಗಲೂ ಸಹ ಅದರ ಮಡಿವಂತಿಕೆಯನ್ನು ಇಟ್ಟುಕೊಳ್ಳದೆ ಎಲ್ಲಾ ಎಡಪಂಥೀಯ ಚಳುವಳಿಗಳ ಜೊತೆಗೆ ನಿಲ್ಲುತ್ತಿದ್ದರು. ಅವರು ಶತಾಯುಷಿ. ಪೂರ್ಣ ಬದುಕನ್ನು ಬದುಕಿ ನಿರ್ಗಮಿಸಿದರು. ಅವರ ನಿರ್ಗಮನ ನಿಸರ್ಗ ಸಹಜವಾದುದು. ಆದರೆ ಸಿದ್ಧಲಿಂಗಯ್ಯನವರು ತೀರಿಕೊಂಡಿರುವುದು 67 ನೇ ವಯಸ್ಸಿನಲ್ಲಿ. ಇದು ಸಹಜವಾಗಿ ನಿಧನರಾಗುವ ವಯಸ್ಸಲ್ಲ.
ಸಿದ್ಧಲಿಂಗಯ್ಯನವರು ತಮ್ಮ ಎರಡನೇ ಬಿ.ಎ ಪದವಿಯಲ್ಲಿದ್ದಾಗಲೇ ಚಳುವಳಿಗಳ ಸಂಪರ್ಕಕ್ಕೆ ಬಂದವರು. ನಮ್ಮಲ್ಲರಿಗೂ ಗೊತ್ತಿರುವಂತೆ ಬೂಸಾ ಚಳುವಳಿಯಲ್ಲಿ ಹಲ್ಲೆಗೊಳಗಾಗಿ, ಬಚ್ಚಿಟ್ಟುಕೊಂಡು ಪ್ರಾಣ ಕಾಪಾಡಿಕೊಳ್ಳಬೇಕಾಯಿತು. ನಂತರ ದಲಿತ ಚಳುವಳಿ ಹುಟ್ಟಿಕೊಂಡಿತು. ಆಗ ಮಾರ್ಕ್ಸ್ ವಾದಿ ಹಿನ್ನೆಲೆಯನ್ನು ಹೊಂದಿದ್ದ ಸಿದ್ಧಲಿಂಗಯ್ಯನವರು ದಲಿತ ಸಂಘರ್ಷ ಸಮಿತಿಯ ಮುಂಚೂಣಿ ನಾಯಕರಲ್ಲಿ ಒಬ್ಬರಾದರು. ನನಗೆ ಆ ಕಾಲಘಟ್ಟ ಇನ್ನೂ ನೆನಪಿದೆ. ಸಿದ್ಧಲಿಂಗಯ್ಯನವರನ್ನು ನಾವು ಯಾಕೆ ಅಷ್ಟೊಂದು ಆರ್ದ್ರವಾಗಿ ನೆನಪಿಸಿಕೊಳ್ಳುತ್ತಿದ್ದೇವೆ ಎಂದರೆ ಅವರು ಬಹಳ ಸಂಚಲನಾತ್ಮಕ ಕಾಲಘಟ್ಟದಲ್ಲಿ ಜೀವಿಸಿದ್ದ ಕವಿಯಾಗಿದ್ದರು. ಇದು ಕೇವಲ ಸಂಚಲನಾತ್ಮಕ ಸಂದರ್ಭದ ಮಾತಲ್ಲ. ಸಿದ್ಧಲಿಂಗಯ್ಯನವರು ಒಂದು ಸಂಚಲನಾತ್ಮಕ ಕಾಲಘಟ್ಟದಲ್ಲಿ ಬದುಕಿದ ಕವಿ ಮಾತ್ರವಲ್ಲ, ನಂತರ ಆ ಕಾಲಘಟ್ಟದಲ್ಲಿ ಸ್ವತಃ ಸಂಚಲನೆಯನ್ನು ತಂದ ಕವಿ. ಆ ಕಾಲಘಟ್ಟವೇ ಆ ಕವಿಯನ್ನು ರೂಪಿಸಿತು. ಜನತೆಯ ಬಳಿಗೆ ಕೊಂಡೊಯ್ದು ನಿಲ್ಲಿಸಿತು ಮತ್ತು ಜನತೆಯನ್ನು ಆ ಸಂಚಲನೆಯ ಭಾಗವಾಗಿಸಲು ಇವರ ಹಾಡುಗಳು, ಮಾತುಗಳು, ಬರವಣಿಗೆಗಳು ಪ್ರೇರೇಪಿಸಿದವು.
ಜನತೆ ಯಾಕೆ ಒಬ್ಬ ಕವಿಯನ್ನು ಜ್ಞಾಪಕವಾಗಿಟ್ಟುಕೊಳ್ಳುತ್ತಾರೆ? ಆತ ಸುಂದರವಾದ ಕಾವ್ಯವನ್ನು ಬರೆದಿದ್ದಾನೆ ಎಂಬ ಕಾರಣಕ್ಕಾಗಿ ಅಲ್ಲ. ದೊಡ್ಡ ದೊಡ್ಡ ಉದ್ಗ್ರಂಥಗಳನ್ನು ಬರೆದಿದ್ದಾನೆ ಅನ್ನುವ ಕಾರಣಕ್ಕಾಗಿ ಅಲ್ಲ. ಹಾಗೆ ನೋಡಿದರೆ ಸಿದ್ಧಲಿಂಗಯ್ಯನವರು ಆ ರೀತಿಯ ಉದ್ಗ್ರಂಥಗಳನ್ನು ಬರೆಯಲಿಲ್ಲ. ಆದರೆ ಕರ್ನಾಟಕದ ಜನಸಾಮಾನ್ಯರ ನಾಲಗೆಯ ಮೇಲೆ ಸದಾ ನೆಲೆಸಿರುವಂತಹ ಹಾಡುಗಳನ್ನು ಬರೆದರು. ಅದಕ್ಕಾಗಿ ಆ ಕವಿಗೆ ಬಹಳ ಮಹತ್ವವಿದೆ. ಒಬ್ಬ ಕವಿ ನಮ್ಮ ಪರವಾಗಿ ಬರೆಯುತ್ತಿದ್ದಾನೆ ಎಂದಾಗ ಜನರು ಒಪ್ಪಿಕೊಳ್ಳುತ್ತಾರೆ. ನನ್ನ ಕೇರಿಯಿಂದಲೇ ಹುಟ್ಟಿ ಹೋದವನು, ನಮಗಾಗಿ ಬರೆದವನು, ಬದುಕಿದವನು ಎಂಬ ಈ ಕೃತಜ್ಞತೆಯ ಭಾವನೆ ಜನರಲ್ಲಿ ನೆಲೆಸಿದೆ.
ಸಿದ್ಧಲಿಂಗಯ್ಯನವರ ಜನಪರ ರೀತಿಯೇ ಕಾವ್ಯಕ್ಕೆ ಸೌಂದರ್ಯವನ್ನು ತಂದುಕೊಟ್ಟಿತು. ಜನರ ವೇದನೆಯನ್ನೆ ಕಾವ್ಯವಾಗಿಸಿದ ಕವಿ ಅವರು. ಆದ್ದರಿಂದಲೇ ಜನರು ಅವರನ್ನು ಕೃತಜ್ಞತೆಯಿಂದ ನೆನೆಯುತ್ತಾರೆ ಈ ಕವಿ ನಮ್ಮ ಪರವಾಗಿ ಬರೆದ ಎಂದು. ಜನತೆಯ ಪರವಾಗಿ ಬರೆದವರು ಈ ಮೊದಲೂ ಬಹಳ ಜನ ಇದ್ದಾರೆ. ನಮ್ಮ ಕುವೆಂಪು ಅವರೇ ಇದ್ದಾರೆ. ಅವರ ಕಾವ್ಯ, ನಾಟಕ, ಕಾದಂಬರಿ ಎಲ್ಲದರಲ್ಲೂ ಶ್ರೀಸಾಮಾನ್ಯನೇ ಕೇಂದ್ರವಾಗಿದ್ದಾನೆ. ಆದರೆ ಕುವೆಂಪು ಕವಿತೆಗಳನ್ನು ಚಳುವಳಿಗಳಲ್ಲಿ ಜನರು ಹಾಡಿದ್ದು ಕಡಿಮೆ. ಭಾವಗೀತೆಯಾಗಿ ಹಾಡಿದ್ದಾರೆ. ಆದರೆ ಸಿದ್ಧಲಿಂಗಯ್ಯನವರ ಕಾವ್ಯ ಹಾಡಾಗಿ ಬೀದಿ ಬೀದಿಗಳಲ್ಲಿ ಹಸಿದವರನ್ನು, ಅಸಹಾಯಕರನ್ನು ತಲುಪಿದವು.
70ರ ದಶಕದಲ್ಲಿ ಕಾವ್ಯ ಛಂದೋಲಯಗಳ ಮೂಲಕ ಕೂಡಿತ್ತು. ಅಂತಹ ಸಂದರ್ಭದಲ್ಲಿ ಸಿದ್ಧಲಿಂಗಯ್ಯನವರ ಕಾವ್ಯ ಹೊಸ ನುಡಿಗಟ್ಟುಗಳಿಂದ, ಹೊಸ ಪರಿಭಾಷೆಯಿಂದ ಮೂಡಿಬಂತು. ಇವರ ಹೊಸ ಶೈಲಿ ಜನತೆಯ ಶೈಲಿಯಾಗಿತ್ತು. ‘ಗುಡಿಸಲುಗಳು ಗುಡುಗುತಿವೆ, ಬಂಗಲೆಗಳು ನಡುಗುತಿವೆ.’ ‘ನೆನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು, ಕಪ್ಪು ಮುಖ ಬೆಳ್ಳಿ ಗಡ್ಡ ಉರಿಯುತಿರುವ ಕಣ್ಣುಗಳು’, ಇದೂ ಕೂಡಾ ಲಯಬದ್ಧವಾಗಿದೆ. ಕಾವ್ಯಾಲಂಕಾರದಿಂದ ಕೂಡಿದೆ. ಆದರೆ ವಿಷಯ ಬೇರೆಯಾಗಿದೆ. ಇಲ್ಲಿಯ ಜನ ಯಾರು ಎಂದರೆ ನೊಂದವರು, ಶೋಷಣೆಗೆ ಒಳಗಾದವರು, ದಲಿತರು. ಬೆಟ್ಟದಂತೆ ಬಂದವರು ಇವರು. ಅಲ್ಲಿಯವರೆಗೂ ಕಾವ್ಯದ ಅಲಂಕಾರದಲ್ಲಿ ಇಲ್ಲದಿದ್ದವರನ್ನು ಸಿದ್ಧಲಿಂಗಯ್ಯನವರ ಕಾವ್ಯ ಒಳಗೊಂಡಿತ್ತು. ಈ ಕವಿಯ ಕವಿತೆ ಒಳಗೊಂಡಿದ್ದು ಬೀದಿ ಮನುಷ್ಯರನ್ನು, ಕೇರಿಯ ಮನುಷ್ಯರನ್ನು, ತಳದಲ್ಲಿ, ಧೂಳಿನಲ್ಲಿ ಬಿದ್ದು ಹೊರಳಾಡುತ್ತಿದ್ದವರನ್ನು. ಹಾಗಾಗಿಯೆ ಜನರು ಅವರನ್ನು ತಮ್ಮ ಎದೆಗೆ ತೆಗೆದುಕೊಂಡರು.
ವಚನಕಾರರು ತಾವು ಬರೆದ ವಚನಗಳನ್ನು ತಮ್ಮ ಕಾಲದಲ್ಲಿ ಜನರು ಹಾಡಿದನ್ನು, ಓದಿದ್ದನ್ನು ಕೇಳಿದ್ದರೋ ಇಲ್ಲವೋ. ಆನಂತರ ಎಷ್ಟೋ ವರ್ಷಗಳ ನಂತರ ಫ. ಗು. ಹಳಕಟ್ಟಿಯವರಂತಹ ವಿದ್ವಾಂಸರು ಸಂಪಾದಿಸಿಕೊಟ್ಟ ಮೇಲೆ ಜನರಿಗೆ ಅವು ತಲುಪಿದವು. ಈಗ ನಾವು ವಚನಗಳನ್ನು ಓದುತ್ತಿದ್ದೇವೆ, ಹಾಡುತ್ತಿದ್ದೇವೆ. ಆದರೆ ಈಗ ನಾವು ಹಾಡುತ್ತಿರುವುದನ್ನು ನೋಡುವ ಸೌಭಾಗ್ಯ ವಚನಕಾರರಿಗೆ ಇಲ್ಲ. ಹಾಗೆಯೇ ವಚನಕಾರರ ಮಾತುಗಳನ್ನು ಕೇಳುವ ಸೌಭಾಗ್ಯ ನಮಗಿಲ್ಲ. ಆದರೆ ಸಿದ್ಧಲಿಂಗಯ್ಯನವರ ವಿಷಯದಲ್ಲಿ ಹಾಗಾಗಲಿಲ್ಲ. ಅವರು ಬದುಕಿದ್ದ ಕಾಲಘಟ್ಟದಲ್ಲೇ ತಮ್ಮ ಕವಿತೆಗಳನ್ನು ಹಾಡಾಗಿಸಿ ಹಾಡಿದ್ದನ್ನು ಕಂಡ ಕವಿ. ಅವರ ಜೊತೆ ನಾವು ಒಡನಾಡಿದ್ದೇವೆ, ಟೀಕಿಸಿದ್ದೇವೆ, ವಿಮರ್ಶಿಸಿದ್ದೇವೆ. ಇದೆಲ್ಲದಕ್ಕಿಂತ ಹೆಚ್ಚಾಗಿ ನಾವು ಅವರನ್ನು ಮೆಚ್ಚುವುದು ಅವರ ಗುಣಕ್ಕಾಗಿ, ಒಳ್ಳೆಯತನಕ್ಕಾಗಿ, ಪ್ರಾಮಾಣಿಕತೆಗಾಗಿ ಮತ್ತು ಅವರ ಸಾಹಿತ್ಯದ ನಿಲುವುಗಳಿಗಾಗಿ.
ನಾನು ಅವರನ್ನು ಮೊದಲು ಭೇಟಿ ಆದದ್ದು ಮೈಸೂರು ಮಹಾರಾಜಾ ಕಾಲೇಜಿನ ಎರಡನೇ ಬಿ.ಎ ವಿದ್ಯಾರ್ಥಿ ಆಗಿದ್ದಾಗ. ವಿಶ್ವವಿದ್ಯಾಲಯದ ಶತಮಾನೋತ್ಸವ ಭವನದಲ್ಲಿ ವಿಚಾರ ಸಂಕಿರಣವೊಂದಕ್ಕೆ ಅವರು ಬಂದಿದ್ದರು. ಆ ಕಾಲಕ್ಕೆ ಸಿದ್ಧಲಿಂಗಯ್ಯನವರು ಅದ್ಭುತ ವಾಗ್ಮಿ. ದೊಡ್ಡ ದೊಡ್ಡ ಶಬ್ದಗಳನ್ನು ಉಪಯೋಗಿಸುವವರಲ್ಲ. ದೊಡ್ಡ ದನಿಯಲ್ಲಿ ಮಾತನಾಡುವವರೂ ಅಲ್ಲ, ದೊಡ್ಡ ದೊಡ್ಡ ಪರಿಕಲ್ಪನೆಗಳನ್ನು ಉಪಯೋಗಿಸಿ ಮಾತನಾಡುವವರೂ ಅಲ್ಲ. ನೇರವಾಗಿ ಬೀದಿಯ ಅನುಭವಗಳನ್ನು, ಜನತೆಯ ಅನುಭವಗಳನ್ನು ಜನರ ಭಾಷೆಯಲ್ಲಿಯೇ ಮನಮುಟ್ಟುವಂತೆ ಸಹಜವಾಗಿ ಮಾತನಾಡುತ್ತಿದ್ದರು.
70-80ರ ದಶಕದಲ್ಲಿ ಮೈಸೂರಿನ ಸಾಹಿತ್ಯ, ಸಾಂಸ್ಕೃತಿಕ ವಾತಾವರಣ ಉತ್ತುಂಗದಲ್ಲಿತ್ತು. ಅಂತಹ ಸಂದರ್ಭದಲ್ಲಿ ಸಿದ್ಧಲಿಂಗಯ್ಯನವರ ಮಾತು ಮತ್ತು ಕಾವ್ಯ ಹೊಸನುಡಿಗಟ್ಟಿನಿಂದ ಕೂಡಿತ್ತು. ಅಲ್ಲಿಯವರೆಗೂ ಇದ್ದ ವಿದ್ವಾಂಸ ಗಾಂಭಿರ್ಯವನ್ನು ಮುರಿದು ಸಹಜ ಮನುಷ್ಯರ ರೀತಿ ಅವರು ಮಾತನಾಡಿದರು. ಆಗ ನಮ್ಮ ಆನಂದಕ್ಕೆ ಪಾರವೇ ಇರಲಿಲ್ಲ. ಆಗಲೇ ಅವರ ಜನಪ್ರಿಯತೆ ಎಷ್ಟಿತ್ತು ಎಂದರೆ, ವೇದಿಕೆಯಿಂದ ಇಳಿದು ಬಂದಾಗ ನೂರಾರು ಜನ ಅವರನ್ನು ಸುತ್ತುವರಿದರು, ಅವರನ್ನು ನೋಡುವುದಾಕ್ಕಾಗಿಯೇ ವಿದ್ಯಾರ್ಥಿಗಳು ಅಲ್ಲಿಗೆ ಬಂದಿದ್ದರು.
ಅವರು ಆಗ ನನಗೆ ಕಾಮ್ರೇಡ್. ನಾನೂ ಕೂಡ ಮಾರ್ಕ್ಸ್ ವಾದಿ ಪಕ್ಷದ ಸದಸ್ಯನಾಗಿದ್ದೆ. ಎಸ್.ಎಫ್.ಐ. ನಲ್ಲಿದ್ದೆ. ನಾನು ಸಿದ್ಧಲಿಂಗಯ್ಯನವರನ್ನು ನನ್ನ ಹಾಸ್ಟೆಲ್ ರೂಮಿಗೆ ಆಹ್ವಾನಿಸಿದೆ. ಅಲ್ಲಿಗೂ ಬಂದರು. ನಮ್ಮೆಲ್ಲರಿಗೂ ರೋಮಾಂಚನ. ಆದರೆ ಅವರು ಮಾತ್ರ ಎಂದಿನಂತೆ ತಮ್ಮ ಮುದುಡಿದ ಶೈಲಿಯಲ್ಲಿ ಕುಳಿತು ಮಾತನಾಡಿ ಹೊರಟರು. ಅಂದು ನಮ್ಮ ಹಾಸ್ಟೆಲ್, ಕಾರಿಡಾರ್ ಎಲ್ಲವೂ ವಿದ್ಯಾರ್ಥಿಗಳಿಂದ ತುಂಬಿ ತುಳುಕಾಡಿತ್ತು. ಈ ರೀತಿಯ ವ್ಯಕ್ತಿತ್ವದ ಮೂಲಕ ಸಿದ್ಧಲಿಂಗಯ್ಯನವರು ನಮ್ಮನ್ನು ಪ್ರಭಾವಿಸಿದರು. ನಾನಂತೂ ಈ ವಿಷಯದಲ್ಲಿ ಬಹಳ ಮೆಚ್ಚುಗೆಯಿಂದ ಮತ್ತು ಹೆಮ್ಮೆಯಿಂದ ಹೇಳುತ್ತೇನೆ-ನಾವು ವಿದ್ಯಾರ್ಥಿ ದೆಸೆಯಿಂದಲೂ ಇವರ ಹಾಡುಗಳನ್ನು ಹಾಡುತ್ತಾ ಬೆಳೆದವರು. ಅವರ ಹಾಡುಗಳು ನಮಗೆ ಪ್ರಾರ್ಥನಾ ಗೀತೆಗಳಂತಿದ್ದವು, ಆಶಯ ಗೀತೆಗಳಾಗಿದ್ದವು. ಯಾವುದೇ ಕರ್ಯಕ್ರಮ ಆರಂಭದಲ್ಲಿ ಸಿದ್ಧಲಿಂಗಯ್ಯನವರ ಹಾಡಿಲ್ಲದೆ ಪ್ರಾರಂಭವಾಗುತ್ತಿರಲಿಲ್ಲ. ಇವರ ಹಾಡುಗಳನ್ನು ಹಾಡುತ್ತಲೇ ಕೇಳುತ್ತಲೇ ಜನರು ಆವೇಶಭರಿತರಾದರು, ಹೋರಾಟದ ಆಶಯಗಳನ್ನು ಕಲಿತರು. ಹಾಡುಗಳು ಜನರನ್ನು ಮುನ್ನಡೆಸಿದವು. ಚರಬಂಡರಾಜು ಹೇಳುವಂತೆ ‘ಹೋರಾಟವೇ ಡೈರೆಕ್ಷನ್, ಹಾಡು ನನಗೆ ಆಕ್ಸಿಜನ್. ಇಂತಹ ನಿಜವಾದ ಸಂದರ್ಭವನ್ನು ಕರ್ನಾಟಕದಲ್ಲಿ 80ರ ದಶಕದಲ್ಲಿ ನಾವು ನೋಡಿದೆವು. ಸಿದ್ಧಲಿಂಗಯ್ಯನವರ ಹಾಡುಗಳನ್ನು ಹಾಡದೇ ಇರುವ ಯಾವ ಜನಪರ ಚಳುವಳಿ ಇದೆ ಕರ್ನಾಟಕದಲ್ಲಿ? ರೈತ ಚಳುವಳಿ, ದಲಿತ ಚಳುವಳಿ, ಎಡಪಂಥೀಯ ಚಳುವಳಿ- ಹೀಗೆ ಎಲ್ಲರೂ ಹಾಡಿದವರೇ.
ನನಗೆ ಅವರ ಹಾಡುಗಳ ಜೊತೆಗೆ ಹೆಚ್ಚು ನಿಕಟ ಸಂಪರ್ಕ ಬರಲು ಕಾರಣವೆಂದರೆ, ನಾನು ಬಿ.ಎ ಯಿಂದ ಎಂ.ಎ ಮುಗಿಯುವವರೆಗೆ ವಿದ್ಯಾರ್ಥಿ ಜೀವನದಲ್ಲಿ ಚಳುವಳಿಗಾರನೇ ಆಗಿದ್ದೆ. ನಂತರದಲ್ಲಿ ನಾನು ಸರ್ಕಾರಿ ಉದ್ಯೋಗಕ್ಕೆ ಸೇರಲಿಲ್ಲ. ಆನಂತರ ಸುಮಾರು 15 ವರ್ಷಗಳ ಕಾಲ ಪೂರ್ಣಾವಧಿ ಕಾರ್ಯಕರ್ತನಾಗಿ ಕರ್ನಾಟಕದ ಎಡಪಂಥೀಯ ಚಳುವಳಿಯಲ್ಲಿ ಸಕ್ರಿಯನಾಗಿದ್ದೆ. ಮೊದಲು ನಾನು ಸಿ.ಪಿ.ಎಂ. ನಲ್ಲಿದ್ದೆ. ಆನಂತರ ತೀವ್ರಗಾಮಿ ಎಡಪಂಥೀಯ ಚಳುವಳಿಗೆ ಆಕರ್ಷಿತನಾಗಿ ಮಾರ್ಕ್ಸ್ ವಾದ-ಲೆನಿನ್ವಾದಗಳ ಬೆನ್ನುಬಿದ್ದೆ. ‘ಕರ್ನಾಟಕ ವಿಮೋಚನಾ ರಂಗ’ ಕಟ್ಟಿದೆವು.
ನಾವು ದಲಿತ ಚಳುವಳಿಯಲ್ಲಿದ್ದಾಗ, ರೈತ ವಿದ್ಯಾರ್ಥಿ ಹೋರಾಟದಲ್ಲಿದ್ದಾಗ, ವಿಚಾರವಾದಿ, ಬಂಡಾಯ ಸಾಹಿತ್ಯ ಸಂಘಟನೆಯಲ್ಲಿದ್ದಾಗ ಆಗ ಎಲ್ಲ ಸಂದರ್ಭಗಳಲ್ಲಿಯೂ ಸಿದ್ಧಲಿಂಗಯ್ಯನವರ ಹಾಡುಗಳನ್ನು ಹಾಡುತ್ತಾ ಬಂದವರು. 80 ಮತ್ತು 90ರ ದಶಕದಲ್ಲಿ ನಾವು ವಿದ್ಯಾರ್ಥಿ ಯುವಜನರು ವಿದ್ಯಾಭ್ಯಾಸ ಮಾಡುತ್ತಲೇ ನಮ್ಮ ಸಾಮಾಜಿಕ ಚಿಂತನೆ ಮತ್ತು ವ್ಯಕ್ತಿತ್ವಗಳನ್ನು ರೂಪಿಸಿಕೊಂಡೆವು. ಇಂತಹ ಸಂದರ್ಭದಲ್ಲಿ ಸಿದ್ಧಲಿಂಗಯ್ಯನವರ ಮಾತು, ಕಾವ್ಯ, ಹಾಡು ಎಲ್ಲವೂ ನಮ್ಮ ಜೊತೆಗಿದ್ದವು. ನಿಜದ ಅರ್ಥದಲ್ಲಿ ಸಿದ್ಧಲಿಂಗಯ್ಯನವರು ಕರ್ನಾಟಕದ ಜನಕವಿ. ಆಂಧ್ರದಲ್ಲಿ ಚರಬಂಡರಾಜು ಇದ್ದಂತೆ ಕರ್ನಾಟಕದಲ್ಲಿ ಸಿದ್ಧಲಿಂಗಯ್ಯನವರು ಜನಕವಿ.
ಅವರು ನಮ್ಮ ಸಮಕಾಲೀನರಾಗಿದ್ದರು, ನಮ್ಮ ಸ್ನೇಹ ವಲಯದಲ್ಲಿದ್ದರು. ಹಾಗಾಗಿ ನನಗೆ ಸಂತೋಷ ಮತ್ತು ಧನ್ಯತೆ. ಅಂತಹ ಕವಿ ಈಗ ನಮ್ಮನ್ನು ಅಗಲಿದ್ದಾರೆ. ಆದರೆ ಅವರ ಹಾಡುಗಳು ನಮ್ಮ ಜೊತೆಗಿವೆ. ಕವಿಯ ಕಡೆಯ ಕಾಲದ ರಾಜಕೀಯದ ನಿಲುವುಗಳ ಬಗ್ಗೆ ನನಗೆ ಕೆಲವು ಟೀಕೆ ಮತ್ತು ವಿಮರ್ಶೆಗಳಿರಬಹುದು, ಆಕ್ಷೇಪಗಳಿರಬಹುದು, ಬೇಜಾರುಗಳಿರಬಹುದು. ಯಾಕೆಂದರೆ ನಮ್ಮ ನಿರೀಕ್ಷೆಗಳು ಈಡೇರಲಿಲ್ಲ ಎಂದು. ಜನ ವಿರೋಧಿಗಳ ಜೊತೆ ಅವರು ಎಲ್ಲೋ ಒಂದು ಕಡೆ ರಾಜಿಯಾಗಿಬಿಟ್ಟರೇ ಎಂದು? ಸಮಾಧಾನವಾಗಿ ಕೂತುಬಿಟ್ಟರೇ ಎಂದು? ಇರಬಹುದು. ಅದೇನೇ ಇದ್ದರೂ 80-90ರ ದಶಕದಲ್ಲಿ ಕರ್ನಾಟಕದ ಜನಪರ ಚಳುವಳಿಗಳ ಸಂಚಲನಕ್ಕೆ ಸಿದ್ಧಲಿಂಗಯ್ಯನವರ ಕಾವ್ಯ, ಹಾಡು ಚಲನೆಯನ್ನು, ಉತ್ಸಾಹವನ್ನು ತುಂಬಿದ್ದನ್ನು ಮರೆಯಲು ಸಾಧ್ಯವಿಲ್ಲ. ಈ ಎಲ್ಲದರಿಂದಾಗಿ ಆ ಕವಿಗೆ ಗೌರವದ ಶ್ರದ್ಧಾಂಜಲಿ, ಕೃತಜ್ಞತೆಯ ಕಣ್ಣೀರು, ನಮಸ್ಕಾರ.