ಲಕ್ಷ್ಮಣ ಕೌಂಟೆ ಅವರು ಬರೆದಿರುವ `ಧರೆಯ ತಂದವರು ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಒಂದು ವಿಚಾರ ಸಂಕಿರಣವನ್ನೂ ಮಾಡುವುದು ಬಹಳ ಮುಖ್ಯ ಅಂತ ನಾನು ಸೂಚಿಸಿದೆ. ಇದನ್ನು ನಾನು ಯಾಕೆ ಸೂಚಿಸಿದೆ ಅಂದರೆ ಈ ವಿಷಯಗಳ ಮೇಲೆ ವಿಶ್ವವಿದ್ಯಾಲಯದಂತಹ ಆವರಣಗಳಲ್ಲಿ ಚರ್ಚೆ ಆಗುವಂಥದ್ದು ಬಹಳ ಮುಖ್ಯ ಅಂತ ನನ್ನ ಭಾವನೆ. ಮಂಟೇಸ್ವಾಮಿ ಅಲಕ್ಷಿತ ವಲಯದಿಂದ ಬಂದಂತಹ ಒಬ್ಬ ಸಂತ, ಅಲಕ್ಷಿತ ಜನರಿಂದ ಪೂಜಿತನಾಗುತ್ತಿರುವ ಪವಾಡ ಪುರುಷ. ಈ ಜಾತ್ರೆಗೆ ಹೋಗುವಂಥವರನ್ನ ನೋಡಿದರೆ ನಮಗೆ ಗೊತ್ತಾಗುತ್ತೆ. ಈ ಕಾಲಘಟ್ಟದಲ್ಲಿ ಸ್ವಲ್ಪ ಬದಲಾವಣೆ ಆಗಿರಬಹುದು. ಆದರೆ ಸ್ವಲ್ಪ ಹಿಂದಕ್ಕೆ ನಾವು ನೋಡಿದರೆ ಅರೆ ಅಕ್ಷರಸ್ಥರು, ಅನಕ್ಷರಸ್ಥರು, ರೈತಾಪಿಜನ, ಬಡವರು- ಆ ರೀತಿಯಾದ ಜನ ಬರುತ್ತಿದ್ದಂತಹ ಜಾತ್ರೆಗಳು, ಆಚರಣೆಗಳು ಇವು. ಈ ವಿಶ್ವವಿದ್ಯಾಲಯಗಳು ತಮ್ಮ ಶೈಕ್ಷಣಿಕ ವಲಯದ ಒಳಗಡೆ ಅವರನ್ನ ಚರ್ಚೆ ಮಾಡಬೇಕಾದ ಅಗತ್ಯ ಎಲ್ಲಿಂದ ಬಂತು? ಚಿಂತನಾ ಕ್ಷೇತ್ರದಲ್ಲಿ ಆಧುನಿಕೋತ್ತರವಾದ ಪ್ರವೃತ್ತಿ ಬೆಳೆಯುವುದಕ್ಕೆ ಶುರುವಾಯ್ತು 90 ರ ದಶಕದಲ್ಲಿ. ನಮ್ಮ ಕರ್ನಾಟಕದ ವಿದ್ವಾಂಸರು ಕೂಡ ಅದಕ್ಕೆ ಪೂರಕವಾಗಿ ಇರುವಂತಹ ಬರವಣಿಗೆಗಳನ್ನು ಆಗಿನಿಂದ ಮಾಡತೊಡಗಿದರು.
ನಮ್ಮ ವೇದಿಕೆಯಲ್ಲಿ ಇವತ್ತಿನ ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿರುವ ಎಚ್.ಎಸ್. ಶಿವಪ್ರಕಾಶ್ ಅವರು “ಮಂಟೆಸ್ವಾಮಿ ಕಥಾ ಪ್ರಸಂಗ” ಎನ್ನುವ ನಾಟಕವನ್ನು ಬರೆದರು. ಅದರ ರಂಗಪ್ರದರ್ಶನ ನಿಜವಾಗಿಯೂ ಒಂದು ಸಂಚಲನವನ್ನ ಉಂಟುಮಾಡಿತು. ಅಲ್ಲಿಯವರೆಗೂ ಇದ್ದಂತಹ ಮಂಟೆಸ್ವಾಮಿಯ ಗ್ರಹಿಕೆ – ಬರೀ ಪವಾಡ ಪುರುಷನಾಗಿ, ಒಬ್ಬ ಸಂತನಾಗಿ ಇದ್ದಂತಹ ಒಂದು ಗ್ರಹಿಕೆಯನ್ನ ಅದು ಬಹಳ ಭಿನ್ನವಾಗಿ ರಂಗದ ಮೇಲೆ ತಂದಿತು. ಆತನನ್ನು ನಮ್ಮ ನಡುವಿನ ಒಬ್ಬ ಲೌಕಿಕ ಸಂತನನ್ನಾಗಿ, ಇಲ್ಲಿ ಒಂದು ಲೋಕವನ್ನು ಕಟ್ಟುವ ಕಾಯಕವನ್ನು ಮಾಡಿದಂತಹ ಪವಾಡ ಪುರುಷನನ್ನಾಗಿ ನಿರೂಪಿಸಲಾಯಿತು. ಅದೇ ಸಮಯಕ್ಕೆ ಸ್ವಲ್ಪ ಹಿಂಚುಮುಂಚಿನಲ್ಲಿ ನಮ್ಮ ದೇವನೂರು ಮಹಾದೇವ ಅವರು ಕುಸುಮಬಾಲೆ ಕಾದಂಬರಿಯನ್ನ ಪೂರ್ವೀಕನಾದ ಮಲೆಯ ಮಾದೇಶ್ವರಂಗೆ ಅರ್ಪಿಸಿದರು. ಅದೂ ಕೂಡ ಈ ಶೈಕ್ಷಣಿಕ ವಲಯದ ಗಮನ ಇವರೆಲ್ಲರ ಮೇಲೆ ಬೀಳೋದಕ್ಕೆ ಕಾರಣವಾಗಿರುವ ಪ್ರೇರಣೆ ಅಂತ ನಾನು ಭಾವಿಸುತ್ತೇನೆ.
ಈ ಆಧುನಿಕೋತ್ತರವಾದ ವಿಷಯದಲ್ಲಿ ನಾವು ಆಧುನಿಕಗೊಂಡಿದ್ದ ಒಂದು ಹಳೆಯ ಚಾಳಿಯನ್ನು ಕಳೆದುಕೊಳ್ಳಬೇಕಾಗಿತ್ತು. ನಮ್ಮ ಶೈಕ್ಷಣಿಕ ವಲಯ ಆಧುನಿಕವಾದುದನ್ನು ಕಲಿಯಬೇಕು ಅನ್ನುವ ಹಾದಿಯಲ್ಲಿ ಪರಂಪರೆಯನ್ನ ಮರೆತುಬಿಟ್ಟಂತಹ ಒಂದು ನಡಿಗೆಯನ್ನ ಆರಂಭಿಸಿತ್ತು. ನಮಗಿದ್ದ ಸ್ಪಷ್ಟತೆಯ ಕೊರತೆಯ ಕಾರಣದಿಂದಾಗಿ ಪರಂಪರೆಯನ್ನ ಸಂಪ್ರದಾಯದಿಂದ ಬಿಡಿಸಿ ನೋಡುವುದಕ್ಕೆ ಆಗದೇ ಇದ್ದಂತಹ ದೃಷ್ಟಿಕೋನಗಳನ್ನ ನಾವು ವಿಶ್ವವಿದ್ಯಾಲಯಗಳಲ್ಲಿ ಕಲಿತೆವು. ಯಾವಾಗ ಆಧುನಿಕದ ನಂತರ ಆಧುನಿಕೋತ್ತರ ಅನ್ನುವ ಸಿದ್ಧಾಂತಗಳು, ಚರ್ಚೆಗಳು ಶುರುವಾಯಿತೋ ಆಗ ನಾವು ಅರಿಯಬೇಕಾಗಿರುವ ಒಂದು ಪರಂಪರೆ ಅನ್ನೋದಿದೆ, ನಾವು ಸ್ವತಃ ಬೆಳೆಸಬೇಕಾಗಿರುವ ಪರಂಪರೆ ಒಂದಿದೆ, ಅದು ಇಲ್ಲಿದೆ ಅನ್ನೋದನ್ನು ಈ ರೀತಿಯ ಬರವಣಿಗೆಗಳು, ನಮ್ಮ ದೇವನೂರು ಮಹಾದೇವ ಮತ್ತು ಶಿವಪಕಾಶ್ ಮತ್ತು ಡಿ.ಆರ್. ನಾಗರಾಜರಂತಹವರ ಕೃತಿಗಳು ಸೂಚಿಸಿದವು. ದೇವನೂರು ಮಹಾದೇವ ಅವರು ತಮ್ಮ ಅರ್ಪಣೆಯ ಸಾಲುಗಳಲ್ಲಿ ಹೆಚ್ಚೇನೂ ವಿವರಿಸಿಲ್ಲ. ಪೂರ್ವೀಕನಾದ ಮಲೆಯ ಮಹದೇಶ್ವರಂಗೆ ಅಂತ ಹೇಳಿ ಬಿಟ್ಟುಬಿಟ್ಟಿದ್ದಾರೆ. ಅಷ್ಟು ಮಾತಿನೊಳಗೆ ಅವರು ಎಷ್ಟು ದೊಡ್ಡ ಗುರಿಯನ್ನ ಸಾಧಿಸಿದ್ದಾರೆ ಅಂದರೆ, ದೇವರಾಗಿರುವ ದೇವರನ್ನು ತನ್ನ ಪೂರ್ವಿಕ ಎಂದು ಹೇಳಿ, ಇದ್ದಕ್ಕಿದ್ದಂತೆ ನೆಲಕ್ಕೆ ತಂದು ಇಳಿಸಿದರು. ತನ್ನ ಪೂರ್ವಿಕರೂ ದೇವರಾಗಿರುವುದಕ್ಕೂ ಸಾಧ್ಯ ಎನ್ನುವುದನ್ನ ದಲಿತ ಸಮುದಾಯಕ್ಕೆ ಜ್ಞಾಪಿಸಿದರು. ಆಧುನಿಕೋತ್ತರವಾದದಲ್ಲಿ ನಾವು ಪರಂಪರೆಯನ್ನ ಒಳಗೊಳ್ಳುವ ಬಗೆ ಅದು. ನಮಗೆ ಬೇಕಾಗಿರುವ ಒಂದು ಶಕ್ತಿ ಅಲ್ಲಿಂದ ಒದಗಿಬರಬೇಕು. ಆ ಪ್ರೇರಣೆಯನ್ನು ಅದು ನಮಗೆ ಕೊಡಬೇಕು. ಅದನ್ನು ಕುಸುಮಬಾಲೆ, ಮಂಟೇಸ್ವಾಮಿ ಕಥಾ ಪ್ರಸಂಗ, ಮಾದಾರಿ ಮಾದಯ್ಯ ಮುಂತಾದ ಕೃತಿಗಳು ಒಟ್ಟಾರೆಯಾಗಿ ನಮ್ಮ ಶೈಕ್ಷಣಿಕ ವಲಯಕ್ಕೆ ಒಂದಿಷ್ಟು ಅರಿವನ್ನು ಮೂಡಿಸಿದವು.
ಇಷ್ಟಾದ ಮೇಲೂ ಕೂಡ ಮಂಟೇಸ್ವಾಮಿ ಮತ್ತು ಮಲೆ ಮಹದೇಶ್ವರರನ್ನ ಭಕ್ತಿ ನೆಲೆಯಲ್ಲಿ ನೋಡುವ ಒಂದು ವಿಧಾನವೇ ಇನ್ನೂ ಪ್ರಧಾನವಾಗಿದೆ. ಚಿಂತಕರು, ಬರಹಗಾರರು, ವಿಮರ್ಶಕರು ಇವರೆಲ್ಲರೂ ಕೂಡ ಇನ್ನೂ ಒಂದು ಸ್ವಲ್ಪ ಅದನ್ನು ಸೂಕ್ಷ್ಮವಾಗಿ ಅರಿಯಬೇಕಾದುದಿದೆ. ನಾವು ಆಧುನಿಕೋತ್ತರವಾದಗಳನ್ನು ಮಾತನಾಡುವಾಗ ಆಧುನಿಕತೆಯನ್ನ ಪೂರ್ತಿ ಕಳೆದುಕೊಂಡವರೂ ಅಲ್ಲ. ಅದನ್ನು ಬಿಟ್ಟುಬಿಡಬೇಕು ಅನ್ನುವವರೂ ಅಲ್ಲ. ಆಧುನಿಕತೆಯನ್ನ ಕಂಡೇ ಮುಂದಕ್ಕೆ ಹೋಗುತ್ತಾ ಇರುವವರು. ಆಧುನಿಕತೆಯ ಒಳ್ಳೆಯ ಗುಣಗಳೇನಿದೆಯೋ ಅದನ್ನು ನಾವು ಕಲಿಯಲೇಬೇಕು. ಆದರೆ ಆಧುನಿಕತೆ ನಮಗೆ ಕಲಿಸಿರುವಂತಹ ಕೆಲವು ಅಪಪಾಠಗಳನ್ನು ನಾವು ಕೈಬಿಡಲೇಬೇಕು.
ನಮ್ಮೊಳಗೆ ಏನೂ ಇರಲಿಲ್ಲ; ಎಲ್ಲವನ್ನೂ ಕೂಡ ಇಂಗ್ಲಿಷ್ ಶಿಕ್ಷಣವೇ ತಂದುಕೊಟ್ಟಿತು; ಆಧುನಿಕತೆಯನ್ನು ಬ್ರಿಟಿಷ್ ಆಡಳಿತವೇ ತಂದುಕೊಟ್ಟಿತು; ವಿಜ್ಞಾನ ಅನ್ನುವುದು ಇವತ್ತು ಶುರುವಾಯ್ತು ಅನ್ನೋ ರೀತಿಯ ಕಲ್ಪನೆಗಳಿಂದ ನಾವು ನಮ್ಮ ಪರಂಪರೆಯನ್ನು ಕೈಬಿಟ್ಟಿದ್ದೆವು. ಅದೊಂದು ಸಕಾರಣವಾದ ಹೆದರಿಕೆಯಾಗಿದ್ದಿರಬಹುದು. ಅದಕ್ಕೆ ಕಾರಣ ಏನೆಂದರೆ ನಮ್ಮಲ್ಲಿದ್ದಂತಹ ಅನಿಷ್ಟ ಸಂಪ್ರದಾಯಗಳು. ಪರಂಪರೆಯ ಜೊತೆಗೆ ನಮ್ಮ ಕೆಲವು ಸಂಪ್ರದಾಯಗಳೂ ಕೂಡ ಸೇರಿಹೋಗಿವೆ. ಆ ಸಂಪ್ರದಾಯದಲ್ಲಿ ಜಾತೀಯತೆ ಇದೆ, ಶ್ರೇಷ್ಠತೆ-ಕನಿಷ್ಠತೆ ಇದೆ, ಹೊರಗಿಡುವ ಪ್ರವೃತ್ತಿ ಇದೆ, ಮೌಢ್ಯ ಇದೆ, ಕಂದಾಚಾರ ಇದೆ. ಇವುಗಳಿಂದ ನಮ್ಮ ಸಮುದಾಯವನ್ನ ಬಿಡುಗಡೆ ಮಾಡಿಸಬೇಕು ಅಂತ ನಾವು ಹೊರಟ ಹಾದಿಯಲ್ಲಿ ಇವುಗಳ ಇನ್ನೊಂದು ಮಗ್ಗುಲಲ್ಲಿ ಇದ್ದ, ನೆಲದ ಮರೆಯ ನಿಧಾನದಂತಿದ್ದ ನಮ್ಮ ಪರಂಪರೆಯನ್ನೂ ನಿರ್ಲಕ್ಷ್ಯ ಮಾಡಿದೆವು. ನಮ್ಮ ಪರಂಪರೆಯ ಒಡಗಡೆಯೇ ಇವೆಲ್ಲ ಅನಿಷ್ಟಗಳನ್ನು ನಿರಾಕರಿಸಿರೋದೂ ಇದೆಯಲ್ಲ. ವಿಚಾರವಂತಿಕೆಯನ್ನು ಬೆಳೆಸಿರುವಂತಹ ಪರಂಪರೆಯೂ ಇದೆಯಲ್ಲ. ಜಾತಿ ವ್ಯವಸ್ಥೆಯನ್ನು ನಿರಾಕರಿಸಿ ಒಂದು ಹೊಸ ಲೋಕವನ್ನ ಕಟ್ಟಬೇಕು ಎಂಬ ಆಶಯವನ್ನು ಇಟ್ಟುಕೊಂಡಿರುವಂತಹ ಪರಂಪರೆಯೂ ಇದೆಯಲ್ಲ.
ಅದನ್ನು ಗಮನಿಸುವುದಕ್ಕೆ ಬೇಕಾಗಿರುವಂತಹ ಚರ್ಚೆಗಳಿಗೆ ಈ ರೀತಿಯ ಪಠ್ಯಗಳು ನಮಗೆ ಬಹಳ ಮುಖ್ಯ ಪ್ರೇರಣೆಯಾಗಬೇಕು. ಅದರರ್ಥ ಮತ್ತೊಂದು ಸಲ ನಾವು ಗುಡ್ಡರಾಗಬೇಕು, ನೀಲಗಾರರಾಗಬೇಕು ಅಂತ ಅಲ್ಲ. ಆಧುನಿಕೋತ್ತರದಲ್ಲಿ ಅಂತಹದೊಂದು ಅಪಾಯವೂ ಇದೆ. ಮೊದಲು ಆಧುನಿಕರಾಗುವ ಭರದಲ್ಲಿ ಎಲ್ಲವನ್ನೂ ಬಿಸುಟಿದೆವು. ಸತ್ತೆಯನ್ನು ಬಿಸಾಡುವುದರ ಜೊತೆಗೆ ಕೂಸನ್ನೂ ಬಿಸಾಡಿದರು ಅಂತಾರಲ್ಲ ಹಾಗೆ. ಅದಕ್ಕೋಸ್ಕರವಾಗಿ ಮತ್ತೆ ಇನ್ನೊಂದು ಸಲ ಸತ್ತೆಯನ್ನ ತಂದು ಮೈಮೇಲೆ ಹಾಕಿಕೊಳ್ಳಬೇಕಾದ್ದೇನೂ ಇಲ್ಲ. ಪರಂಪರೆಯ ಹೆಸರಲ್ಲಿ ಸಂಪ್ರದಾಯದ ಅನಿಷ್ಟಗಳೂ ನಮ್ಮ ಜೊತೆಗೆ ಮತ್ತೆ ಬರಬಾರದು. ನಾವು ಹಿಂತಿರುಗಿ ನಡೆಯೋದಕ್ಕೆ ಹೊರಟವರಲ್ಲ. ಹಿಂತಿರುಗಿ ನೋಡುನೋಡುತ್ತಲೇ ನಾವು ಮುಂದಿನ ನಡಗೆಯನ್ನು ನಡೆಯಬೇಕಾಗಿರುವಂಥವರು. ಅದಕ್ಕೆ ಬೇಕಾಗಿರುವ ಪ್ರೇರಣೆಯನ್ನ ಮಂಟೇಸ್ವಾಮಿ ಪಠ್ಯ ನಮಗೆ ಯಾವ ಮಟ್ಟಿಗೆ ಒದಗಿಸುತ್ತಾ ಇದೆ, ಮಲೆ ಮಹದೇಶ್ವರ ಪಠ್ಯ ಯಾವ ರೀತಿ ಒದಗಿಸುತ್ತಾ ಇದೆ, ಇತರ ನಮ್ಮ ಜನಪದ ಕಾವ್ಯಗಳು, ಕುಲಕಥನಗಳು, ಸಮುದಾಯ ಕಥನಗಳು ಪರಂಪರೆಯ ಒಳಗಡೆಯಿಂದಲೇ ಎಷ್ಟು ಚೆನ್ನಾಗಿ ಅವನ್ನು ಕಟ್ಟಿಕೊಡುತ್ತಾ ಇವೆ ಎಂಬುದನ್ನು ಗ್ರಹಿಸಬೇಕು.
ಗಂಗಭಾರತ ಎಂದು ತೆಲುಗಿನಲ್ಲಿರುವಂತಹ ಒಂದು ಮೌಖಿಕ ಕಥನದಲ್ಲಿ ಇರುವಂತಹ ಕಾಣ್ಕೆಗಳನ್ನ ಗಮನಿಸುತ್ತಾ ಹೋದರೆ ಬಹಳ ವಿಚಿತ್ರವಾಗಿರುವ ಅರಿವು ನಮಗೆ ಬರುವುದಕ್ಕೆ ಶುರುವಾಗುತ್ತೆ. ಅದರಲ್ಲಿರುವ ದಲಿತ ಸಮುದಾಯ ಗಂಗೆ ನಮ್ಮ ಮಗಳು ಅಂತ ಹೇಳುತ್ತೆ. ಕಾಶಿ ನಮ್ಮದಾಗಿತ್ತು, ಅದನ್ನ ಬಿಟ್ಟುಕೊಟ್ಟೆವು ಎನ್ನುತ್ತದೆ. ಇದು ನಿಜ ಇರಬಹುದಾ, ಇಲ್ಲವಾ? ಅದನ್ನು ಕಂಡುಹಿಡಿಯಬೇಕಾಗಿರುವುದು ಸಂಶೋಧಕರರು, ಅಧ್ಯಯನಕಾರರ ಕೆಲಸ. ಪರಂಪರೆ ಹಾಗೂ ಇತಿಹಾಸದ ಪ್ರಕಾರ ಕಾಶಿ ಅನ್ನುವಂಥಾದ್ದು ಚಮ್ಮಾರರಿಗೂ ಮತ್ತು ನೇಕಾರರಿಗೂ ಬಹಳ ದೊಡ್ಡ ಕೇಂದ್ರ ಆಗಿತ್ತು. ಅವೆರಡೂ ಕಸುಬು ಕಲೆಗಳಿಗೂ ಅದು ಬಹಳ ಪ್ರಸಿದ್ಧವಾದುದಾಗಿತ್ತು- ಚಮ್ಮಾರಿಕೆಗೂ, ಚರ್ಮದ ಕರಕುಶಲ ವಸ್ತುಗಳಿಗೂ ಮತ್ತು ನೇಕಾರಿಕೆಗೆ. ಅದೇ ಕಥೆಯನ್ನೇ ಇವರು ಬೇರೆ ರೂಪದಲ್ಲಿ ಹೇಳುತ್ತಾ ಇರಬಹುದು. ಕಾಶಿ ನಮ್ಮದಾಗಿತ್ತು, ಅದನ್ನ ಬಿಟ್ಟುಕೊಟ್ಟೆವು ಅಂತ. ಅದನ್ನು ನಾವು ಅಧ್ಯಯನ ಮಾಡಿ, ಅದರ ಪ್ರೇರಣೆಯಿಂದ ನಾವು ಕಲಿಯುವುದು ಏನಿದೆ? ಎಲ್ಲಿಂದ ಅದನ್ನು ಕಲಿಯಬೇಕು? ಅದಕ್ಕೆ ಬೇಕಾಗಿರುವಂತಹ ಒಂದು ಅಧ್ಯಯನಾತ್ಮಕ ಶಿಸ್ತನ್ನು ಮತ್ತು ಅದಕ್ಕೆ ಬೇಕಾಗಿರುವ ಸಿದ್ಧತೆಯನ್ನು ಮಾಡಿಕೊಳ್ಳುವುದಕ್ಕೆ ನಮಗೆ ಶೈಕ್ಷಣಿಕ ವಲಯ ನೆರವಾಗಬೇಕು.
ನಾವು ಮತ್ತೆ ಮೌಢ್ಯಕ್ಕೆ ಚಲಿಸುವುದಲ್ಲ. ಆದರೆ ಅಲ್ಲಿರುವಂತಹ ಮಗು ಇದೆಯಲ್ಲ- ನಾವು ಸತ್ತೆಯ ಜೊತೆಗೆ ತಿಪ್ಪೆಗೆ ಎಸೆದಿರುವ ಮಗು ಇದೆಯಲ್ಲ ಅದನ್ನ ಎತ್ತಿ ತಂದು ನಮ್ಮ ನಡುವೆ ಕೂರಿಸಿಕೊಳ್ಳಬೇಕು. ಆ ಮುಖಾಂತರವಾಗಿ ನಮಗೆ ಮಂಟೇಸ್ವಾಮಿ ಮತ್ತು ಮಲೆ ಮಹದೇಶ್ವರರು ಹಾಗೂ ಆ ರೀತಿಯಾಗಿರುವ ಕುಲಕಥನಗಳು ಅರ್ಥವಾಗತೊಡಗಬೇಕು. ಆ ಗಂಗಭಾರತ ಕಥನದ ಹೇಳಿಕೆಗಳನ್ನು ನೋಡಿದರೆ ಅದರಲ್ಲಿ ಎಷ್ಟು ಸಾಂಸ್ಕೃತಿಕ ಪದರಗಳ ಆಳ ಇದೆ ಅಂತ ನನಗಂತೂ ದಿಗ್ಭ್ರಮೆ ಹುಟ್ಟುತ್ತೆ. ಗಂಗೆ ನಮ್ಮದು, ಝಂಝಾ ನಮ್ಮದು, ಜನಿವಾರ ನಮ್ಮದು ಎನ್ನುವ ಮಾತುಗಳಿವೆ ಅದರಲ್ಲಿ. ಅದನ್ನು ಸುಳ್ಳುಸುಳ್ಳೇ ಹೇಳುವುದಕ್ಕೆ ಅವರಿಗೆ ಹೇಗೆ ಸಾಧ್ಯ? ಅದನ್ನು ಬೇರೆ ಯಾರಿಗೋಸ್ಕರವಾಗಿಯೋ ಅವರು ಬರೆದಿರೋರಲ್ಲ. ಬೇರೆ ಯಾರನ್ನೋ ನಂಬಿಸುವುದಕ್ಕೂ ಬರೆದಿರೋರಲ್ಲ. ಅವರಷ್ಟಕ್ಕೆ ಅವರೇ ಹಾಡಿಕೊಳ್ಳುತ್ತಾ ಇರುವಂತಹ ಒಂದು ಕಥನ ಅದು. ಶೋತೃಗಳಿಗೋಸ್ಕರ ಪ್ರೇಕ್ಷಕರಿಗೋಸ್ಕರ ಬರೆದಿರುವಂಥದ್ದಲ್ಲ. ಕುಲಸಂಸ್ಕೃತಿಯ ಕಥನ ಅದು. ಯಾಕೆ ಆ ಬಗೆಯ ಪ್ರತಿಪಾದನೆ ಬರುತ್ತೆ? ಹಾಗಾದರೆ ಜನಿವಾರ ಎಲ್ಲಿಂದ ಬಂದಿರಬೇಕು ಅಂತಾದ್ರೂ ನಾವು ಹುಡುಕಬೇಕು. ಅಧ್ಯಯನಕಾರರ ಕೆಲಸ ಅದು. ಜನಿವಾರವನ್ನು ಮೊದಲನೇ ಸಲ ತೊಡಿಸಿದಾಗ ಈಗಲೂ ಒಂದು ಚರ್ಮದ ಚೂರನ್ನು ಕಟ್ತಾರೆ ಅದರ ತುದಿಗೆ. ಅದು ಯಾಕಿರಬಹುದು ಅಂತ ಕಂಡುಕೊಳ್ಳಬೇಕು. ಮೊದಲ ಸಲಕ್ಕೆ ಜನಿವಾರವನ್ನು ಹಾಕಬೇಕಾದರೆ ಅದಕ್ಕೆ ಚರ್ಮದ ಚೂರನ್ನು ಕಟ್ಟಬೇಕು. ಈ ಚರ್ಮದ ಚೂರು ಯಾಕೆ? ದಾರದ ಜನಿವಾರಕ್ಕೆ ಅದು ಯಾಕೆ? ಯಾಕೆ ಅಂದರೆ, ಮೊದಲು ಜನಿವಾರ ಪೂರ್ತಿ ಚರ್ಮದ್ದೇ ಆಗಿತ್ತು. ಶಿವ ತನ್ನ ದೇಹಕ್ಕೆ ಅಡ್ಡಡ್ಡವಾಗಿ ಕಟ್ಟಿಕೊಂಡಿರುವ, ಬಿಲ್ಲಿಗೆ ಹೆದೆಯೇರಿಸುವಾಗ ಮೈಗೆ ಪೆಟ್ಟುಬೀಳಬಾರದು ಅಂತ ಅವನು ಅಡ್ಡವಾಗಿ ಕಟ್ಟಿಕೊಂಡಿದ್ದಂತಹ ಚರ್ಮಾಂಬರ ಇದೆಯಲ್ಲ ಅದು ಜನಿವಾರದ ಮೂಲ. ಅದು ನಿಧಾನವಾಗಿ ಅಗತ್ಯವಾದಾಗ ಬಿಲ್ಲಿಗೆ ಬಿಗಿಯುವ ಪ್ರಾಣಿಯ ನರಗಳಿಂದ ಮಾಡಿದ ಹುರಿಯಾಗಿ ಬದಲಾಯಿತು. ಹೀಗೆ ಪರಿವರ್ತನೆಗೊಳ್ಳುತ್ತಾ ಬ್ರಾಹ್ಮಣರ ಕೈಗೆ ಬಂದ ಮೇಲೆ ಯಜ್ಞೋಪವೀತ ಆಯಿತು. ಆದರೆ ಮೂಲ ಪರಂಪರೆಯನ್ನು ಬಿಡೋದಕ್ಕೆ ಆಗುವುದಿಲ್ಲವಲ್ಲ ಅದಕ್ಕೆ ಮೊದಲ ಸಲ ಜನಿವಾರವನ್ನು ತೊಡಿಸಬೇಕಾದರೆ ಆ ಚರ್ಮದ ಚೂರನ್ನು ಕಟ್ಟಲಾಗಿರುತ್ತೆ. ಅಮೇಲೆ ಉದುರಿಹೋಗುತ್ತೆ ಅದು. ಮುಂದಿನ ಸಲ ಜನಿವಾರ ಹಾಕಬೇಕಾದರೆ ಅದನ್ನೇನೂ ಕಟ್ಟುವುದಿಲ್ಲ. ಈಗ ನಾವು ಹೇಳಬಹುದು, ಈ ಜನಿವಾರ ಎನ್ನುವ ನಿಮ್ಮ ಶ್ರೇಷ್ಠತೆಯ ಸಂಕೇತ ಒಂದು ಕಾಲದಲ್ಲಿ ಚರ್ಮಾಂಬರ, ಶಿವನ ಮೈಮೇಲೆ ಇದ್ದದ್ದು. ನಂತರ ಬೇಟೆಗಾರರು ಸಹಜವಾಗಿ ಧರಿಸುತ್ತಾ ಇದ್ದ ಪ್ರಾಣಿ ದೇಹದ ನರಗಳಿಂದ ಹೊಸೆದ ಹುರಿ ಅದು. ಅದನ್ನು ಯಜ್ಞೋಪವೀತ ಅಂತ ಬಹಳ ಹೆಮ್ಮೆಯಿಂದ ಹೇಳುತ್ತಿದ್ದೀರ. ತೊಂದರೆಯಿಲ್ಲ. ಹಾಕಿಕೊಂಡಿದ್ದೀರ ಹಾಕಿಕೊಳ್ಳಿ. ಆದರೆ ಅದರಿಂದಲೇ ಶ್ರೇಷ್ಠರಾದೆವು ಅಂತ ಭಾವಿಸಬೇಡಿ, ಅದು ಇಲ್ಲಿಂದಲೇ ಹೋಗಿರುವುದು ಅಂತ. ಇದನ್ನ ಹೇಳುವುದಕ್ಕೋಸ್ಕರವಾದರೂ ನಮಗೆ ಪರಂಪರೆಯ ನೆನಪು ಬೇಕು. ನಮ್ಮ ಸಂಸ್ಕೃತಿಗಳನ್ನು ಅರ್ಥಮಾಡಿಕೊಂಡಿರಬೇಕು. ಅದನ್ನು ಬರೀ ಕೀರ್ತಿಸುವುದಲ್ಲ. ಅಧ್ಯಯನಿಸುವುದು ಬಹಳ ಮುಖ್ಯ. ಅರ್ಥೈಸುವುದು ಬಹಳ ಮುಖ್ಯ. ಆ ದಾರಿಯಲ್ಲಿ ಇದೂ ಕೂಡ ಒಂದು ಸಣ್ಣ ನಡಗೆ.
ನನ್ನ ಆಶಯ ಇಷ್ಟೆ- ನಾವು ಆಧುನಿಕತೆಯ ಭ್ರಮೆಯಲ್ಲೂ ಮುಳುಗದೆ, ಆಧುನಿಕೋತ್ತರವಾದ ಹಿಮ್ಮುಖ ಚಲನೆಗೂ ತೊಡಗದೆ ಬಹಳ ಎಚ್ಚರದ ರೀತಿಯಲ್ಲಿ ನಮ್ಮ ಸಂಸ್ಕೃತಿಯನ್ನ ಮತ್ತೊಂದು ಸಲ ಪುನರ್ನಿಮಿಸುವುದಕ್ಕೆ ಪರಂಪರೆಯಿಂದಲೇ ಪ್ರೇರಣೆಯನ್ನು ಪಡೆಯಬೇಕಿದೆ. ಆದರೆ ಇಲ್ಲಿ ಪರಂಪರೆ ಎನ್ನುವುದು ಏಕಾಕಾರಿಯದಲ್ಲ. ಪರಂಪರೆಯಲ್ಲಿ ಹಲವು ಮಗ್ಗಲುಗಳು, ಪದರಗಳು ಇವೆ. ಅದರಲ್ಲಿ ನಮ್ಮ ಪರಂಪರೆಯನ್ನು, ಅದರಲ್ಲಿರುವ ಒಳಿತನ್ನು ಶೋಧಿಸಿಕೊಂಡು ನಡೆಯಬೇಕಿದೆ. ನಮ್ಮ ನಡಗೆ ಯಾವಾಗಲೂ ಭವಿಷ್ಯದ ಕಡೆಗೆ ಇರಬೇಕಾಗುತ್ತದೆ. ಅನಿಷ್ಟಗಳನ್ನ ತೊಳೆದುಕೊಳ್ಳುತ್ತಾ ಮುನ್ನಡೆಯಬೇಕಾಗುತ್ತೆ. ಹೀಗೆ ನಮ್ಮ ನಡೆಯಲ್ಲಿ ಬೆನ್ನ ಹಿಂದೆ ಮಂಟೇಸ್ವಾಮಿ, ಮಲೆ ಮಹದೇಶ್ವರರಿರಲಿ; ಕಣ್ಣ ಮುಂದೆ ಅಂಬೇಡ್ಕರ್ ಇರಲಿ ಅಂತ ಆಶಿಸುತ್ತಿದ್ದೇನೆ.
(ಬೋಧಿವೃಕ್ಷ ಸೊಸೈಟಿ ಫಾರ್ ಡೆವಲಪ್ಮೆಂಟ್, ಜಾನಪದ ಅಕಾಡೆಮಿ ಮುಂತಾದವರು ಸಹಯೋಗದಲ್ಲಿ 24. 08. 2024 ರಂದು ಮೈಸೂರಿನಲ್ಲಿ ನಡೆಸಿದ ರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಗೋಷ್ಠಿಯಲ್ಲಿ ಮಾಡಿದ ಭಾಷಣದ ಬರಹ ರೂಪ)