Skip to main content

Gandhakuti

ಭಾರತವೂ ಸೇರಿದಂತೆ ತೃತೀಯ ಜಗತ್ತು ಎಂದು ಕರೆಸಿಕೊಳ್ಳುವ ದೇಶಭಾಷೆಗಳ ಲೇಖಕರು ಬರವಣಿಗೆ ಮಾಡುವಾಗ ಎದುರಿಸುವ ಸವಾಲುಗಳು ಅನೇಕ. ಅವುಗಳಲ್ಲಿ ಅವರಿರುವ ಕಾಲಘಟ್ಟದ ಸಾಮಾಜಿಕ ವಾಸ್ತವತೆ ಹಾಗೂ ರಾಜಕೀಯ ಪರಿಸ್ಥಿತಿ ಇವುಗಳನ್ನು ಒಳಗೊಳ್ಳದೆ ಸಾಹಿತ್ಯವನ್ನು ಬರೆಯುವುದು ಕಷ್ಟ. ಸಾಹಿತಿ ಅಂದರೆ ಸಮಾಜದಲ್ಲಿನ ಸಕ್ರಿಯ ಪ್ರಜ್ಞೆ ಎಂದಾಗುತ್ತದೆ. ಆ ಸಕ್ರಿಯ ಪ್ರಜ್ಞೆ ಇರುವ ಬರಹಗಾರ ತನ್ನೊಳಗಿನ ತೊಳಲಾಟಗಳನ್ನು ಬರಹದ ಭಿತ್ತಿಯಲ್ಲಿ ಮೂಡಿಸುವಾಗ ಸಾಮಾಜಿಕ ವಸ್ತುಸ್ಥಿತಿ ಆತನನ್ನು ಪ್ರಭಾವಿಸುತ್ತದೆ. ವಿಶ್ಲೇಷಣೆ, ಚಿಂತನೆ, ವಿಮರ್ಶೆ, ಕವಿತೆ, ಕತೆ, ಕಾದಂಬರಿ ಹೀಗೆ ಏನನ್ನು ಬರೆಯುವಾಗಲೂ ಲೇಖಕನೊಳಗೆ ಒಂದು ಎಚ್ಚೆತ್ತ ಪ್ರಜ್ಞೆ ತನ್ನ ಸಂದರ್ಭದ ಪರಿಶೀಲನೆಯ ನೆಲೆಯನ್ನು ಇಟ್ಟುಕೊಳ್ಳಬೇಕಾಗುತ್ತದೆ.

ಆತ ಸಾಹಿತ್ಯದ ವಿದ್ಯಾರ್ಥಿಯಾಗಿರಲಿ, ಇತರೆ ಮಾನವಿಕ ಶಾಸ್ತçಗಳ ವಿದ್ಯಾರ್ಥಿಯಾಗಿರಲಿ ಸಮಾಜವನ್ನು ಹಲವು ಮುಖಗಳಿಂದ ಅವಲೋಕಿಸುವ ಕೆಲಸವನ್ನು ನಿರಂತರವಾಗಿ ಮಾಡಬೇಕಾಗುತ್ತದೆ. ಇದಕ್ಕಾಗಿ ಓದಿನ ವ್ಯಾಪ್ತಿ ವಿಸ್ತಾರವಾಗಬೇಕು. ಸಾಹಿತ್ಯ ಕೃತಿಗಳನ್ನು ಮಾತ್ರವೇ ಓದಿ ಸಾಹಿತ್ಯ ವಿಮರ್ಶೆ ಬರೆದರೆ ಅದಕ್ಕೆ ಒಂದು ಆಯಾಮ ಮಾತ್ರ ದಕ್ಕುತ್ತದೆ. ಸಾಹಿತ್ಯವೆನ್ನುವುದು ಯಾವಾಗಲೂ ಲೇಖಕನ ಕನ್ನಡಿಯಲ್ಲಿ ಪ್ರತಿಬಿಂಬಿತವಾದ ತನ್ನ ಹಿಂದುಮುಂದಣ ಸಮಾಜವೇ ಆಗಿರುತ್ತದೆ. ಕೇವಲ ಕಲ್ಪನೆಯನ್ನು ಮಾತ್ರ ಆಧರಿಸಿ ಸಾಹಿತ್ಯ ಬರೆಯುತ್ತೇನೆಂದು ವಾದಿಸುವ ಸಾಹಿತಿಯ ಕಲ್ಪನೆಗಳೂ ಕೂಡ ಈ ಸಾಮಾಜಿಕ ಸಂದರ್ಭದಿಂದ ಒಂದಲ್ಲ ಒಂದು ಬಗೆಯಲ್ಲಿ ಪ್ರೇರಿತವಾಗಿರುತ್ತವೆ. ಆದ್ದರಿಂದ ಪೂರ್ತಿ ನಿರ್ಲಿಪ್ತವಾಗಿ ಬರವಣಿಗೆ ಮಾಡುವುದು ಹೆಚ್ಚೂಕಡಿಮೆ ಅಸಾಧ್ಯವಾದ ವಿಚಾರ.

ವಿಚಾರ ಮಾಡುವಾಗ, ವಿಷಯಗಳನ್ನು ಪರಿಶೀಲನೆ ಮಾಡುವಾಗ, ವಸ್ತುವನ್ನು ಅರ್ಥೈಸುವಾಗ ಅತಿರೇಕಗಳಿಗೆ ಹೋಗದಂತೆ ಒಂದು ಸಮತೋಲನವನ್ನು ಬರಹಗಾರ ಕಾಯ್ದುಕೊಳ್ಳುವುದು ಅಪೇಕ್ಷಣೀಯ. ಆದರೆ ಸಮತೋಲನವೆನ್ನುವುದು ‘ಅದೂ ಸರಿ-ಇದೂ ಸರಿ’ ಎನ್ನುವ ಡೋಲಾಯಮಾನವಲ್ಲ. ಹಾಗೆ ಡೋಲಾಯಮಾನ ಮನಃಸ್ಥಿತಿ ಇಟ್ಟುಕೊಂಡು ಬರವಣಿಗೆ ಮಾಡಿದರೆ ಗೊಂದಲ ಹುಟ್ಟುತ್ತದೆಯೇ ಹೊರತು ಕೃತಿ ಏನನ್ನೂ ಸಾಧಿಸುವುದಿಲ್ಲ. ಓದುಗನಲ್ಲಿ ಚಿಂತನೆಯನ್ನು ಬೆಳೆಸಬೇಕು ಎಂದು ಮಾಡುವ ಬರವಣಿಗೆ ಬೇರೆ. ಇದು ಓದುಗನನ್ನು ಕೈಹಿಡಿದು ನಡೆಸುವುದಿಲ್ಲ. ಓದುಗ ತನಗೆ ಬೇಕಾದ ಆಲೋಚನೆಗಳನ್ನು ಕಂಡುಕೊಳ್ಳುವಂತೆ ಪ್ರೇರೇಪಿಸುತ್ತದೆ. ಓದುಗನ ಅಭಿಪ್ರಾಯಗಳನ್ನು ನಿರ್ದೇಶಿಸುವುದಕ್ಕೆ ಹುಟ್ಟಿಕೊಂಡ ಬರವಣಿಗೆಗಳಿಗೆ ಇರುವ ವ್ಯಾಪ್ತಿಗಿಂತ ಓದುಗನನ್ನು ಒಳಗೊಂಡು ಅವನೊಳಗಿನ ಪ್ರಜ್ಞೆಯನ್ನು ಉಜ್ವಲಗೊಳಿಸುವ ಕೆಲಸ ಮಾಡುವ ಕೃತಿಗಳಿಗೆ ಹೆಚ್ಚು ಮಾನ್ಯತೆ ಇರುತ್ತದೆ.

ಹಾಗಾದಲ್ಲಿ ಬರಹಗಾರ ತನ್ನ ಬರವಣಿಗೆಯಲ್ಲಿ ಮಾಡಬೇಕಿರುವುದೇನು? ಅಲ್ಲಿ ವಾದ ಹೂಡುವುದಲ್ಲ. ಬದಲಾಗಿ ತಾನು ಚಿಂತಿಸಿದ್ದನ್ನು ಮಂಡಿಸಬೇಕು. ಇದು ಹೀಗಿರಬಹುದೆನ್ನಿಸುತ್ತದೆ, ಈ ಕಾರಣಗಳಿಗಾಗಿ ಹೀಗನ್ನಿಸುತ್ತಿದೆ, ಪರಿಶೀಲನೆಯಿಂದ ವ್ಯಕ್ತಗೊಳ್ಳುವ ಅಭಿಪ್ರಾಯ ಇದಾಗಿದೆ ಎನ್ನುವ ಧೋರಣೆಯಲ್ಲಿ ಬರಹಗಾರ ಓದುಗನೊಂದಿಗೆ ಸಂವಾದ ನಡೆಸಬೇಕು. ಓದುಗ ಏಕಕಾಲದಲ್ಲಿ ಆ ಬರಹದೊಂದಿಗೂ, ತನ್ನ ಮನಸ್ಸಿನೊಂದಿಗೂ ಸಂವಾದ ಮಾಡುತ್ತಾ ತನಗೆ ಅನಿಸಿದ್ದನ್ನು ಹಾಗೂ ಹಾಗೆ ಅನಿಸಲು ಕಾರಣವಾಗಿದ್ದನ್ನು ಕಂಡುಕೊಳ್ಳುತ್ತಾನೆ. ಲೇಖನವೊಂದು ಕೊಡುವ ಮಾಹಿತಿ, ಮಂಡಿಸುವ ವಿವರಗಳು, ಅವುಗಳ ಮುಖಾಂತರ ನಡೆಸುವ ವಿಚಾರಮಂಥನ ಇವೆಲ್ಲವೂ ವಸ್ತುನಿಷ್ಠವಾಗಿ ಖಚಿತ ಮಾಹಿತಿಯೊಂದಿಗೆ ತನ್ನ ಉದಾಹರಣೆ ಮತ್ತು ಉಲ್ಲೇಖಗಳೊಂದಿಗೆ ಮಂಡನೆಯಾಗಿದ್ದಲ್ಲಿ ಓದುಗ ಆ ಓದಿನಿಂದ ಪರಿಣಾಮಕ್ಕೊಳಗಾಗುತ್ತಾನೆ.

ಪ್ರಭಾವಕ್ಕೊಳಗಾಗುತ್ತಾನೆ ಎನ್ನದೇ ಪರಿಣಾಮಕ್ಕೊಳಗಾಗುತ್ತಾನೆ ಎಂದು ನಾನು ಹೇಳಿದ್ದು ಯಾಕೆಂದರೆ, ಪರಿಣಾಮವೆನ್ನುವುದು ಒಂದು ಪ್ರಕ್ರಿಯೆ. ಅದೊಂದು ಆಗುತ್ತಾ ಆಗುಮಾಡುವ ಕ್ರಿಯೆ. ಪ್ರಭಾವಿಸುವುದೆನ್ನುವುದು ತರ್ಕ ಸರಣಿ. ಆಕರ್ಷಕವಾದ ತರ್ಕಸರಣಿ ಕೆಲವು ಸಲ ಪ್ರಭಾವ ಬೀರುತ್ತದೆಯಾದರೂ ಕಾಲಾಂತರದಲ್ಲಿ ಅದಕ್ಕಿಂತಲೂ ಆಕರ್ಷಕವಾದ ತರ್ಕ ಸರಣಿಯೊಂದು ಕಂಡಾಗ ಈ ಪ್ರಭಾವ ಬಿದ್ದುಹೋಗಬಹುದು. ಪರಿಣಾಮ ಎನ್ನುವುದು ನಂಬಿಸುವುದಕ್ಕಾಗಿ ಮಾಡುವ ಪ್ರಯತ್ನವಲ್ಲ. ಅವರೊಳಗೆ ಆಲೋಚನೆ ಹುಟ್ಟುವಂತೆ ಮಾಡಿ, ಆ ಕುರಿತು ಓದುಗನೂ ವಿಚಾರಮಂಥನ ನಡೆಸಿ ತನ್ನ ನಿರ್ಣಯಕ್ಕೆ ತಾನು ಬಂದರೆ ಅಲ್ಲಿ ಪರಿಣಾಮ ಪ್ರಕ್ರಿಯೆ ಹೆಚ್ಚು ಬಲವಾದುದಾಗಿರುತ್ತದೆ. `ನಾನು ಹೇಳಿದೆ ಎಂದು ನೀನು ನಂಬಬೇಡ, ನಿನಗೆ ಸರಿ ಎನಿಸಿದರೆ ನೀನು ನಂಬು’ ಎಂದು ಉಪದೇಶ ಕೇಳಿ ಬಂದ ಜ್ಞಾನಾರ್ಥಿಯೊಬ್ಬನಿಗೆ ಬುದ್ಧ ಹೇಳಿದ್ದು ಇದೇ ಅರ್ಥದಲ್ಲಿರಬೇಕು. ಕುವೆಂಪು `ಯಾವ ಕಾಲದ ಶಾಸ್ತ್ರ ಏನು ಹೇಳಿದರೇನು ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು’ಎನ್ನುವ ಮಾತು ಹೇಳಿದ್ದೂ ಕೂಡ ಇದೇ ಅರ್ಥದಲ್ಲಿ. ನಂಬಿಸುವಂತೆ ಮಾಡುವುದಕ್ಕಿಂತ ಅರ್ಥವಾಗುವಂತೆ ಮಾಡುವ, ಆ ಮುಖಾಂತರ ತನ್ನ ಎದೆಯ ದನಿ ಏನು ಹೇಳುತ್ತಿದೆ ಎಂಬುದನ್ನು ಕಂಡುಕೊಳ್ಳುವAತೆ ಮಾಡುವ ಬರಹಗಳಿಗೆ ಹೆಚ್ಚಿನ ಮಾನ್ಯತೆ ಇರುತ್ತದೆ.

ಏಕಮುಖವಾದ ಸರಣಿಯ ಲೇಖನಗಳು, ಸುಳ್ಳು ಪ್ರಚಾರಗಳನ್ನು ಮಾಡುವುದಕ್ಕೆ ಕುತರ್ಕಗಳನ್ನು ಪೋಣಿಸಿದ ಲೇಖನಗಳು ಯಾವ ಕಾಲದಲ್ಲಾದರೂ ಇದ್ದೇ ಇರುತ್ತವೆ. ಆದರೆ ಈ ನಡುವೆ ಸರಿ-ತಪ್ಪು, ನ್ಯಾಯಾನ್ಯಾಯಗಳ ತುಲನೆಯನ್ನು ಲೋಕಹಿತದ ದೃಷ್ಟಿಯಿಂದ ಆಲೋಚಿಸಿ ಬರವಣಿಗೆ ಮಾಡುವವರೂ ಬಂದಿದ್ದಾರೆ. ಹೊಸ ತಲೆಮಾರಿನ ಬರಹಗಾರರಲ್ಲಿ ಹಲವರು ಈ ರೀತಿಯ ವಿವೇಕದಿಂದ ಬರವಣಿಗೆಯನ್ನು ಮಾಡತೊಡಗಿದ್ದಾರೆನ್ನುವುದು ಸಂತೋಷದ ವಿಷಯ. ಅಧ್ಯಯನಶೀಲತೆ, ಹಲವು ಬಗೆಯ ವಿಚಾರಗಳ ಪರಿಚಯ, ಹಲವು ಬಗೆಯ ಒಡನಾಟಗಳ ಅನುಭವ, ಸೂಕ್ತ ವಿವೇಚನೆ ಇವುಗಳ ಆಧಾರದಲ್ಲಿ ಬರವಣಿಗೆ ಮಾಡುವ ತರುಣ ಲೇಖಕರ ಬಗ್ಗೆ ನನಗೆ ಬಹಳ ಮೆಚ್ಚುಗೆ. ಬರವಣಿಗೆಯಲ್ಲಿ ಮಾತ್ರವಲ್ಲದೆ, ಒಟ್ಟಾರೆ ವ್ಯಕ್ತಿತ್ವದ ಕ್ರಿಯಾಶೀಲತೆ ತನ್ನ ವೃತ್ತಿ ತನ್ನ ಪ್ರವೃತ್ತಿಗಳೆರಡನ್ನೂ ಒಳಗೊಳ್ಳುವಂತೆ ವಿಸ್ತರಿಸಿದಾಗ ಅದು ಸಮಾಜದೊಂದಿಗೆ ಸಂವಾದ ನಡೆಸುವ ಸೂಕ್ತವಾದ ನೆಲೆಗಟ್ಟನ್ನು ಒದಗಿಸುತ್ತದೆ.

`ಕಣ್ಣಬಿಲ್ಲು’ಡಿ.ಆರ್. ದೇವರಾಜ್ ಅವರ ಮೊದಲ ಲೇಖನಗಳ ಸಂಗ್ರಹ. ಹಲವು ವರ್ಷಗಳಿಂದ ನನ್ನೊಂದಿಗೆ ಆಪ್ತ ಒಡನಾಟ ಹೊಂದಿದ, ಕುಟುಂಬದ ಸ್ನೇಹಿತರಂತೆಯೂ ಇರುವ ದೇವರಾಜು ಅವರ ಒಟ್ಟಾರೆ ಕ್ರಿಯಾಶೀಲತೆ ಮತ್ತು ಆಲೋಚನಾ ರೀತಿ ನನಗೆ ಪ್ರಿಯವಾದವುಗಳು. ‘ಬಯಲು ಬಳಗ’ ಎಂಬ ಉಪನ್ಯಾಸಕರ ವೇದಿಕೆಯನ್ನು ರೂಪಿಸಿಕೊಂಡು  ‘ಬಯಲು’ಎಂಬ ಪತ್ರಿಕೆಯನ್ನೂ ಕೆಲವು ಕಾಲ ಪ್ರಕಟಿಸಿದ ದೇವರಾಜ್ ಈಗ ತಮ್ಮ ಪಿ ಎಚ್ ಡಿ ಅಧ್ಯಯನವನ್ನೂ ಮುಕ್ತಾಯದ ಹಂತಕ್ಕೆ ತಂದಿದ್ದಾರೆ. ಅವರಿಗೆ ಸಾಹಿತ್ಯದ ನಿಕಟ ಪರಿಚಯವಿದೆ. ಒಳ್ಳೆಯ ಓದಿನ ಹಾಗೂ ಸಾಮಾಜಿಕ ಆಶಯಗಳ ಒಲವಿದೆ. ಹಾಗಾಗಿಯೇ ಇಲ್ಲಿರುವ ಲೇಖನಗಳು ಜೀವನಪರವಾದ ಕಾಳಜಿಯಿಂದ ಮಂಡಿತವಾಗಿವೆ. ಒಂದು ಒಳ್ಳೆಯ ಸಮಾಜದಲ್ಲಿ ಏನಿರಬೇಕು? ಒಂದು ಒಳ್ಳೆಯ ಸಮಾಜಕ್ಕೆ ಮಾರ್ಗದರ್ಶನ ಮಾಡುವ ತತ್ವ ಸಿದ್ಧಾಂತಗಳು ಯಾವುವು? ಸಮಾಜಕ್ಕೆ ಮಾದರಿಯಾಗಿ ನಿಲ್ಲುವ ಮಹಾಪುರುಷರು ಯಾರು? ಈ ಸಮಾಜದಲ್ಲಿ ಜಾತಿ ವ್ಯವಸ್ಥೆಯ ಪಾತ್ರವೇನು? ರಾಜಕೀಯ ಆರ್ಥಿಕ ವ್ಯವಸ್ಥೆಯ ವಿನ್ಯಾಸಗಳೇನು? ಮುಂತಾದ ಹಲವು ವಿಷಯಗಳ ಬಗ್ಗೆ ಸದಭಿರುಚಿಯ ಆಸಕ್ತಿಯನ್ನು ಬೆಳೆಸಿಕೊಂಡಿರುವ ದೇವರಾಜ್ ಇಲ್ಲಿನ ಲೇಖನಗಳನ್ನು ಅಧ್ಯಯನಶೀಲ ಜವಾಬ್ದಾರಿಯಿಂದ ಬರೆದಿದ್ದಾರೆ.

ಅವಸರದ ಹೇಳಿಕೆಗಳಾಗಲೀ, ಭಾವಾವೇಶದ ಮಾತುಗಳಾಗಲೀ, ಆತುರದ ನಿರ್ಣಯಗಳಾಗಲೀ ಇಲ್ಲಿನ ಲೇಖನಗಳಲ್ಲಿ ನನಗೆ ಕಂಡುಬರಲಿಲ್ಲ. ಇದನ್ನು ಒಂದು ಆರೋಗ್ಯಕರ ಮನಃಸ್ಥಿತಿ ಎಂದು ನಾನು ಭಾವಿಸುತ್ತೇನೆ. ಯಾವುದೇ ವಸ್ತುವನ್ನು ಆರಿಸಿಕೊಂಡರೂ ಅದಕ್ಕೆ ಸೂಕ್ತವಾದ ಮಾಹಿತಿಯನ್ನು ಹಲವು ಮೂಲಗಳಿಂದ ಹುಡುಕಿಕೊಂಡು ಅವುಗಳನ್ನು ಸುಸಂಯೋಜಿತ ರೀತಿಯಲ್ಲಿ ಮಂಡಿಸುವುದು ಇಲ್ಲಿನ ಲೇಖನಗಳ ಒಂದು ಗುಣವಾಗಿದೆ. ಲೇಖನಗಳ ಗಮನ ಕೂಡ ಹಲವು ನಿಟ್ಟಿನಲ್ಲಿ ಹರಿದಿದೆ. ಅದು ಸಾಹಿತ್ಯ ಕೃತಿಗಳನ್ನು ಪರಿಶೀಲಿಸಿದಂತೆಯೇ ಕೆಲವು ಸಾಹಿತಿಗಳನ್ನೂ ಪರಿಶೀಲಿಸಿದೆ. ಸಾಮಾಜಿಕ ಪರಿಸ್ಥಿತಿಯಲ್ಲಿ ಇರುವ ಹಲವು ತೊಡಕುಗಳನ್ನು ಕಂಡಿದೆ.

ನಮ್ಮ ಸನ್ನಿವೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹೇಗಿದೆ ಎಂದು ಅವರು ಪರಿಶೀಲಿಸುವ ‘ಸಾಹಿತ್ಯ ಸಂದರ್ಭ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ’ ಎಂಬ ಲೇಖನ ಸುದೀರ್ಘವಾಗಿ ಚರ್ಚೆಯನ್ನು ಬೆಳೆಸುತ್ತದೆ. ಈ ಕೃತಿಯಲ್ಲಿ ಅದು ಪ್ರಮುಖ ಲೇಖನವೂ ಆಗಿದೆ. ಅದರಲ್ಲಿ ಅವರು ಮಂಡಿಸುವ ಕೆಲವು ವಿಚಾರಗಳು ಪರಿಶೀಲನೆಗೆ ತಕ್ಕುದಾಗಿದೆ. ‘ಸಾಹಿತ್ಯ ಕೃತಿಗಳ ವಿವಾದಗಳಲ್ಲಿ ಪ್ರಮುಖವಾಗಿ ಮೂರು ಸಂಗತಿಗಳು ಚರ್ಚೆಗೆ ಬರುತ್ತವೆ. ಮೊದಲನೆಯದು, ಸಾಹಿತಿಯ ಅಭಿವ್ಯಕ್ತಿ ಸ್ವಾತಂತ್ರö್ಯ. ಎರಡನೆಯದು, ಸಾಹಿತ್ಯ ಕೃತಿಯು ಪ್ರಕಟಿಸುವ ಸತ್ಯ. ಮೂರನೆಯದು, ಸಮುದಾಯಗಳ ನಂಬಿಕೆಗಳು ಮತ್ತು ಮೌಲ್ಯವ್ಯವಸ್ಥೆ. ಈ ಮೂರು ಸಂಗತಿಗಳಲ್ಲಿ ಮೊದಲೆರಡು ಸಾಹಿತಿಗಳಿಗೆ ಸಂಬAಧಿಸಿದವು. ಮೂರನೆಯದು ಸಮುದಾಯ ಸಂಬAಧಿಯಾಗಿದ್ದು ಭಾರತದಂತಹ ಜಾತಿ ಸಮಾಜದಲ್ಲಿ ಪ್ರತಿಯೊಂದು ಸಮುದಾಯವೂ ಕೆಲವು ಆದರ್ಶ ನಂಬಿಕೆಗಳು ಹಾಗೂ ಮೌಲ್ಯವ್ಯವಸ್ಥೆಯನ್ನು ಕಟ್ಟಿಕೊಂಡಿರುತ್ತದೆ. ತನ್ನ ನಂಬಿಕೆಗಳು ಹಾಗೂ ಮೌಲ್ಯಗಳು ಶಿಥಿಲಗೊಳ್ಳುವುದನ್ನು ಸಮುದಾಯಗಳು ಸಹಿಸಲಾರವು. ಇದು ಹೆಚ್ಚು ಪ್ರಬಲ ಸಮುದಾಯಗಳಿಗೆ ಅಥವಾ ಅಧಿಕಾರಸ್ಥ ಸಮುದಾಯಗಳಿಗೆ ಸಂಬಂಧಿಸಿದ್ದು. ಈ ಸಮುದಾಯಗಳಿಗೆ ತಮ್ಮ ನಂಬಿಕೆಗಳು ಪ್ರಶ್ನಾತೀತ ಹಾಗೂ ಎಂದಿಗೂ ಬದಲಾಗಬಾರದ ಮೌಲ್ಯಗಳಾಗಿವೆ ಎಂದು ಸಮಾಜವನ್ನು ನಂಬಿಸಿರುತ್ತವೆ. ಸಾಹಿತಿ ಸಮುದಾಯಗಳ ಆದರ್ಶ ನಂಬಿಕೆಗಳನ್ನು ಯಾಕೆ ಶಿಥಿಲಗೊಳಿಸಬೇಕು ಎಂಬ ಪ್ರಶ್ನೆ ಸಹಜವಾದದ್ದು. ಆದರೆ ಬದಲಾಗುವ ಕಾಲಮಾನಕ್ಕೆ ಅಗತ್ಯವಾದ ಮೌಲ್ಯಗಳನ್ನು ರೂಪಿಸಲು ಪ್ರಯತ್ನಿಸುವುದೇ ಸಾಹಿತ್ಯದ ಕಾರ್ಯ ಎಂಬ ಅಂಶ ಮಹತ್ವವಾದದ್ದು. ಯಾವುದೋ ಕಾಲದಲ್ಲಿ ರೂಪುಗೊಂಡಿರುವ ಮೌಲ್ಯಗಳು ಎಲ್ಲ ಕಾಲಕ್ಕೂ ಸಲ್ಲುವುದಿಲ್ಲ ಎಂದು ಸಾಹಿತ್ಯ ನಂಬುತ್ತದೆ. ಹಾಗಾಗಿಯೇ ಕುವೆಂಪು “ಆತ್ಮ ಶ್ರೀಗಾಗಿ ನಿರಂಕುಶಮತಿಗಳಾಗಿ” ಎಂದು ಹೇಳಲು ಸಾಧ್ಯವಾಗಿದ್ದು. ಕುವೆಂಪು ಅವರ ‘ಜಲಗಾರ,’ `ಶೂದ್ರತಪಸ್ವಿ,’ `ರಾಮಾಯಣ ದರ್ಶನಂ’ ಹೀಗೆ ಯಾವುದೇ ಕೃತಿಯನ್ನು ತೆಗೆದುಕೊಂಡರೂ ಅಲ್ಲೆಲ್ಲ ಹಳೆಯ ಮೌಲ್ಯಗಳ ವಿರುದ್ಧ ಒಂದು ಸಂಘರ್ಷವಿದೆ; ಪರಂಪರೆಯನ್ನು ಮುರಿದು ಕಟ್ಟುವ ಮನೋಧರ್ಮವಿದೆ.’

ಸಾಹಿತ್ಯವೆನ್ನುವುದೇ ಒಂದು ಬಗೆಯ ಅನ್ವೇಷಣೆ. ಮಾನವಿಕಶಾಸ್ತ್ರಗಳಲ್ಲಿ ಅದನ್ನು ಸಂಶೋಧನೆ ಎನ್ನುತ್ತಾರೆ. ಈ ರೀತಿಯಾದ ಅನ್ವೇಷಣೆ ಅಥವಾ ಸಂಶೋಧನೆ ಈ ಮೊದಲಿನಿಂದ ಇದ್ದ ನಿಲುವು ಮತ್ತು ಅಭಿಪ್ರಾಯಗಳಿಗೆ ಭಿನ್ನವಾದೊಂದು ನೆಲೆಯನ್ನು ಒದಗಿಸಿದಾಗಲೆಲ್ಲ ಅಭಿವ್ಯಕ್ತಿ ಸ್ವಾತ್ರಂತ್ರ್ಯ ಎನ್ನುವುದು ತೀವ್ರ ಬಿಕ್ಕಟ್ಟಿಗೊಳಗಾಗುತ್ತದೆ. ವ್ಯಾಪಕವಾಗಿ ಓದುಗ ವರ್ಗವನ್ನು ತಲುಪುವ ಸಾಧ್ಯತೆಯಿರುವ ಕೃತಿಗಳು ಮತ್ತು ಕೃತಿಕಾರರ ವಿಷಯದಲ್ಲಿ ಇದು ಮತ್ತಷ್ಟು ತೀವ್ರವಾಗಿರುತ್ತದೆ. ಆದರೆ ಈ ರೀತಿ ವಿವಾದಕ್ಕೊಳಗಾಗುವ ಕೃತಿಗಳ ಬಗ್ಗೆ ಪ್ರಭುತ್ವ ಎಂತಹ ಕ್ರಮಗಳನ್ನು ಕೈಗೊಳ್ಳುತ್ತದೆ? ಯಾವ ಬಗೆಯ ವಿವಾದಗಳು ಬಂದಾಗ ಅದು ಲೇಖಕನ ಪರ ವಹಿಸುತ್ತದೆ? ಯಾವ ಬಗೆಯ ವಿವಾದಗಳಲ್ಲಿ ಅದು ವಿವಾದ ಎಬ್ಬಿಸಿದವರ ಪರ ವಹಿಸುತ್ತದೆ ಎನ್ನುವುದು ವಿವಾದಾಸ್ಪದವಾಗಿಯೇ ಇದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವ ಹಕ್ಕು ಲೇಖಕನಿಗೆ ನಿರುಪಾಧಿಕವಾಗಿ ದೊರೆತಿಲ್ಲವಾದರೂ, ದೊರೆತಿರುವ ಸೀಮಿತ ಆವರಣ ಕೂಡ ಎಲ್ಲ ಸಮಯದಲ್ಲಿ ಸಂರಕ್ಷಿತವಾಗುತ್ತದೆ ಎಂದಿಲ್ಲ.

ಈ ಬಗ್ಗೆ ದೇವರಾಜ್ ಏಕಕಾಲದಲ್ಲಿ ಪ್ರಕಟವಾದ `ಆವರಣ’ ಮತ್ತು `ಆನುದೇವಾ ಹೊರಗಣವನು’ ಕೃತಿಗಳಿಗೆ ದೊರೆತ ಸರ್ಕಾರದ ಪ್ರತಿಕ್ರಿಯೆ ಪಕ್ಷಪಾತದಿಂದ ಕೂಡಿತ್ತು ಎನ್ನುವುದನ್ನು ಹೇಳುತ್ತಾ ಅದಕ್ಕೆ ಅವರದೇ ಕಾರಣಗಳನ್ನೂ ಸೂಚಿಸುತ್ತಾರೆ. ‘ಈ ಎರಡೂ ಕೃತಿಗಳ ವಿವಾದದಲ್ಲಿ ಮುಖ್ಯವಾಗಿ ಗಮನಿಸಬೇಕಾದ ಸಂಗತಿಯೊAದಿದೆ. ಅದು ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಆಶಯ ಹಾಗೂ ತನ್ನ ಭಾಷೆ, ಶೈಲಿ ಎಲ್ಲಿಯೂ ಪ್ರಚೋಧನಕಾರಿಯಾಗಿರದ ‘ಆನುದೇವಾ  ಹೊರಗಣವನು’ ಕೃತಿಯನ್ನು ಸರ್ಕಾರ ನಿಷೇಧಿಸಿತು. ಆದರೆ ತನ್ನೆಲ್ಲ ಆಯಾಮಗಳಲ್ಲೂ ಸಮುದಾಯಗಳ ನಡುವೆ ಹಿಂಸೆಯನ್ನು ಪ್ರಚೋಧಿಸುವಂತೆ ರೂಪುಗೊಂಡ ‘ಆವರಣ’ದ ಬಗೆಗೆ ಸರ್ಕಾರ ತಟಸ್ಥ ಧೋರಣೆ ತೋರಿತು. ಕರ್ನಾಟಕದ ಸಾಮಾಜಿಕ ಚಳುವಳಿಗಳು ಈ ಕಾದಂಬರಿಯ ವಿರುದ್ಧ ಮಾಡಿದ ಪ್ರತಿಭಟನೆಗಳಿಗೆ ಕಿವಿಗೊಡಲಿಲ್ಲ. ಈ ಎರಡೂ ಕೃತಿಗಳ ವಿವಾದಗಳನ್ನು ಗಮನಿಸಿದಾಗ ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಪ್ರಬಲ ಸಮುದಾಯಗಳು ನಿಯಂತ್ರಿಸುತ್ತಿವೆ ಎಂಬುದು ಅರ್ಥವಾಗುತ್ತದೆ. ಹಾಗೆಯೇ ಪ್ರಜಾಪ್ರಭುತ್ವದ ಹೆಸರಲ್ಲಿ ಆಳುವ ಸರ್ಕಾರಗಳು ಸಂಕುಚಿತ ಅರ್ಥದಲ್ಲಿ ಸ್ಥಾಪಿತ ಶಕ್ತಿಗಳಿಗೆ ಅನುಗುಣವಾಗಿ ವರ್ತಿಸುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿಯಂತ್ರಿಸುತ್ತಾ ಬಂದ ಚರಿತ್ರೆ ನಮ್ಮದು.’

ಈ ಬಗೆಯ ಪಕ್ಷಪಾತಗಳನ್ನು ಪರಿಶೀಲಿಸುವುದಕ್ಕೆ ಪತ್ರಕರ್ತರ ಪ್ರೆಸ್ ಕೌನ್ಸಿಲ್, ವಕೀಲರ ಬಾರ್ ಕೌನ್ಸಿಲ್ ಇರುವ ಹಾಗೆ ಸಾಹಿತ್ಯ ವಿವಾದಗಳನ್ನು ಪರಿಶೀಲಿಸಲು ಲಿಟರರಿ ಕೌನ್ಸಿಲ್ ಒಂದಿದ್ದರೆ ಅನುಕೂಲ ಎನ್ನುವ ಚಿಂತಕ ಸಿ ಎಚ್ ಹನುಮಂತರಾಯ ಅವರ ಅಭಿಪ್ರಾಯವನ್ನು ಮುಂದೆಮಾಡುತ್ತಾರೆ. ಒಟ್ಟಿನಲ್ಲಿ ದೇವರಾಜ್ ಅವರ ಅಧ್ಯಯನಶೀಲತೆ ಹಾಗೂ ಅಭಿವ್ಯಕ್ತಿ ಕ್ರಮಗಳೆರಡಕ್ಕೂ ಈ ಲೇಖನ ಒಂದು ಉತ್ತಮ ಉದಾಹರಣೆಯಂತಿದೆ.

ಕೆ ವೈ ನಾರಾಯಣಸ್ವಾಮಿ ಅವರ ವಿವರ್ಶೆಯ ಹಾದಿಯ ಬಗ್ಗೆ ಹಾಗೂ ಅವರೇ ಬರೆದಿರುವ ಚಕ್ರರತ್ನ ನಾಟಕದ ಪ್ರಸ್ತುತತೆ ಬಗ್ಗೆ ಎರಡು ಉತ್ತಮ

ಲೇಖನಗಳನ್ನು ಈ ಕೃತಿ ಒಳಗೊಂಡಿದೆ. ಕೆವೈಎನ್ ಸಾಹಿತ್ಯ ಮಾರ್ಗವನ್ನು ಕುರಿತು ಸಾಕಷ್ಟು ಚಿಂತನಾಶೀಲ ಮಾತುಗಳನ್ನು ಇದರಲ್ಲಿ ನಾವು ಕಾಣಬಹುದಾಗಿದೆ. ವ್ಯಕ್ತಿಯ ಬಗ್ಗೆ ಮೆಚ್ಚುಗೆ ಇದ್ದಾಗಲೂ ಅವರ ಸಾಹಿತ್ಯವನ್ನು ಕುರಿತು ಬರೆಯುವಾಗ ಉತ್ಪೆçÃಕ್ಷೆಯ ಮಾತುಗಳನ್ನು ಬಳಸಬಾರದೆಂಬ ಎಚ್ಚರ ದೇವರಾಜ್‌ಗಿರುವುದು ಈ ಲೇಖನದಲ್ಲಿ ನಾವು ಕಾಣಬಹುದಾಗಿದೆ. ಇದೇ ಭಾಗದಲ್ಲಿ ‘ಜನಪ್ರಜ್ಞೆಯ ಚಿಂತಕ ಡಾ. ಹಿಶಿರಾ’ ಎಂಬ ಲೇಖನ ಹಾಗೂ ‘ಪ್ರೇಮಭಾರತದ ಕನಸು ಕಂಡ ಎ. ಸೋಮಲಿಂಗಯ್ಯ’ ಎಂಬ ಲೇಖನಗಳಿದ್ದು, ಒಂದು ಲೇಖನ ಹಿಶಿರಾ ಅವರ ರೈತ ಚಳುವಳಿಯ ಒಡನಾಟ, ರೈತ ಗೀತೆಗಳ ಕೊಡುಗೆ, ನೂರಾರು ವಿದ್ಯಾರ್ಥಿಗಳಲ್ಲಿ ಆದರ್ಶದ ಮೌಲ್ಯಗಳನ್ನು ಮೂಡಿಸಿದ ಚಿಂತನಶೀಲತೆ ಹಾಗೂ ಒಬ್ಬ ವಿದ್ವಾಂಸ ಬರಹಗಾರ, ಎಲ್ಲವೂ ಆಗಿ ಕ್ರಿಯಾಶೀಲರಾಗಿದ್ದ ಪರಿಯನ್ನು ಬಹಳ ಸಮುಚಿತವಾಗಿ ಚಿತ್ರಿಸುತ್ತದೆ. ತತ್ವದ ಹಾದಿಯಿಂದ ಎಂದೂ ವಿಮುಖರಾಗದ ರೈತಪರ ಹೋರಾಟಗಾರ ಸೋಮಲಿಂಗಯ್ಯನವರ ಬದುಕು ಹಾಗೂ ವ್ಯಕ್ತಿತ್ವವನ್ನು ಕೂಡ  ಮತ್ತೊಂದು ಲೇಖನ ಬಹಳ ಅರ್ಥಪೂರ್ಣವಾಗಿ ಚಿತ್ರಿಸಿದೆ. ಇಲ್ಲಿರುವ ಬೇರೆ ಎಲ್ಲ ಲೇಖನಗಳೂ ಕೂಡ ತಮ್ಮ ಅಧ್ಯಯನಶೀಲತೆಯನ್ನು ರುಜುವಾತುಗೊಳಿಸುತ್ತಿವೆ.

ಕುವೆಂಪುವನ್ನಾಗಲೀ, ಗಾಂಧಿಯನ್ನಾಗಲೀ ಏಕನೆಲೆಯಿಂದ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರೆ ನಮಗೆ ಸಿಗುವುದು ಪಾರ್ಶ್ವ ನೋಟ ಮಾತ್ರ. ಆದ್ದರಿಂದ ತೇಜಸ್ವಿಯವರು ಕುವೆಂಪು ಅವರನ್ನು ಅನುಸಂಧಾನ ಮಾಡಲು ಸೂಚಿಸಿದ ಸಂಶ್ಲೇಷಣಾ ಮಾದರಿಯನ್ನೇ ಗಾಂಧಿಯನ್ನು ಅರ್ಥಮಾಡಿಕೊಳ್ಳಲೂ ಬಳಸಬೇಕು ಎಂಬ ಅರ್ಥಪೂರ್ಣವಾದ ಒಳನೋಟದ ಮಾತನ್ನು ಇಲ್ಲಿರುವ ‘ಬುದ್ಧ ಭಾರತ: ಗಾಂಧಿ ಮರುಹುಟ್ಟು’ ಲೇಖನದಲ್ಲಿ ಕಾಣಬಹುದಾಗಿದೆ. ಅಭಿವೃದ್ಧಿ ಎನ್ನುವುದು ಕೇವಲ ಆರ್ಥಿಕ ಗ್ರಹಿಕೆಯಾಗಿ ಇದ್ದಲ್ಲಿ ಅದು ತೃತೀಯ ದೇಶಗಳ ಸಮಾಜಗಳ ಸಮಸ್ಯೆಗಳನ್ನು ಬಗೆಹರಿಸುವುದು ಸಾಧ್ಯವಿಲ್ಲ. ಬದಲಾಗಿ ಆರ್ಥಿಕೇತರ ಸಂಗತಿಗಳಾದ ಸ್ವಾತಂತ್ರ್ಯ, ಮಾನವ ಹಕ್ಕುಗಳು, ಲಿಂಗ ಸಮಾನತೆ, ಆಹಾರ ಭದ್ರತೆ, ಸಾಮಾಜಿಕ ಘನತೆ ಮುಂತಾದವುಗಳ ಜೊತೆಜೊತೆಯಲ್ಲಿಯೇ ಆರ್ಥಿಕ ಬೆಳವಣಿಗೆಯು ಬರಬೇಕು. ಅಮರ್ತ್ಯಸೇನ್ ಹೇಳಿದಂತೆ ‘ಧಾರಣಾಸಾಮರ್ಥ್ಯ ವರ್ಧನಾ ಸಿದ್ಧಾಂತ’ ಎಂಬುದು ನಮ್ಮ ಸಂದರ್ಭಕ್ಕೆ ಹೆಚ್ಚು ಸಮುಚಿತವಾಗಿದೆ ಎನ್ನುವ ಉತ್ತಮ ನಿಲುವನ್ನು ಇದರಲ್ಲಿನ ಮತ್ತೊಂದು ಲೇಖನ ಒಳಗೊಂಡಿದೆ.

ಗೋಹತ್ಯೆ ನಿಷೇಧದಿಂದ ಬರುವ ಕೃಷಿ ಬಿಕ್ಕಟ್ಟು, ಕೋಮುವಾದವು ಈಗ ತಲುಪಿರುವ ಸ್ಥಿತಿಗಳು, ದೇಸೀಯತೆ ಮತ್ತು ಆಡಳಿತಶಾಹಿ ವ್ಯವಸ್ಥೆಯ ನಡುವಿನ ಬಿಕ್ಕಟ್ಟುಗಳನ್ನು ವಿವರಿಸುವ ಲೇಖನಗಳಲ್ಲದೆ ಇನ್ನೂ ಕೆಲವು ಲೇಖನಗಳು ಇದರಲ್ಲಿದ್ದು, ಎಲ್ಲವೂ ಗಮನಾರ್ಹವಾಗಿವೆ. ‘ವಚನಗಳು: ಶಿಕ್ಷಣ-ಶುದ್ಧಿ’ ಲೇಖನದಲ್ಲಿ ವಚನಗಳ ಹೊಸ ಬಗೆಯ ವಿಶ್ಲೇಷಣೆ ಅಷ್ಟಾಗಿ ಕಾಣಸಿಗದಿದ್ದರೂ ವಿವಿಧ ವಚನಕಾರರು ತಮ್ಮ ವಚನಗಳಲ್ಲಿ ಅರಿವು, ಜ್ಞಾನ, ಭಕ್ತಿ ಮುಂತಾದವುಗಳನ್ನು ಯಾವ ನೆಲೆಯಿಂದ ಗ್ರಹಿಸಿದ್ದಾರೆ, ಅವರೊಳಗಿನ ಚಿತ್ತಶುದ್ಧಿ, ದೇಹಶುದ್ಧಿ ಮುಂತಾದವುಗಳೆಲ್ಲ ಹೇಗೆ ಹೊಸತೊಂದು ಅನುಭಾವಿಕ ಮೀಮಾಂಸೆಯನ್ನು ಕಟ್ಟಿಕೊಡುತ್ತವೆ ಎನ್ನುವುದನ್ನು ಅಚ್ಚುಕಟ್ಟಾಗಿ ನಿರೂಪಿಸುತ್ತದೆ.

ಹೀಗೆ ಎರಡು ಭಾಗಗಳಲ್ಲಿ ವಿಂಗಡಿತವಾಗಿರುವ ‘ಕಣ್ಣ ಬಿಲ್ಲು’ ಕೃತಿಯಲ್ಲಿ ಇರುವ ಒಟ್ಟು ಹದಿನೈದು ಲೇಖನಗಳು ಗಂಭೀರ ಓದಿಗೆ ಅರ್ಹವೆನಿಸುವಂತಿವೆ. ಇವು ಲಹರಿಯ ಲೇಖನಗಳಲ್ಲ. ಕೇವಲ ಆಲೋಚನೆ ಅಥವಾ ಅನಿಸಿಕೆಗಳನ್ನು ಪ್ರಸ್ತುತಪಡಿಸುವ ಜಾಡಿನವುಗಳೂ ಅಲ್ಲ. ಒಂದು ಶೈಕ್ಷಣಿಕ ಶಿಸ್ತಿನ ಚೌಕಟ್ಟಿನಲ್ಲಿ ರೂಪುಗೊಂಡ ಪ್ರಬಂಧಗಳು. ಇಂತಹ ಪ್ರಬಂಧಗಳಲ್ಲಿ ನಾವು ಗಮನಿಸಬೇಕಾಗಿರುವುದು ಅದರ ನಿರೂಪಣೆಯ ಬಿಗಿ, ಮಾಹಿತಿ ಸಂಗ್ರಹದ ಕೌಶಲ ಹಾಗೂ ಅಧ್ಯಯನಕಾರ ತನ್ನ ಅಭಿಪ್ರಾಯ ಮಂಡನೆಗೆ ಪೂರ್ವದಲ್ಲಿ ನಡೆಸಿರುವ ವಿವೇಚನೆ, ಅಭಿಪ್ರಾಯವನ್ನು ಮಂಡಿಸುವಾಗ ಇರಬೇಕಾದ ಸಂಯಮ, ಸಮತೋಲನ- ಇವು ಇಂತಹ ಅಧ್ಯಯನಾತ್ಮಕ ಪ್ರಬಂಧಗಳಲ್ಲಿ ನಾವು ನಿರೀಕ್ಷಿಸಬಹುದಾದ ಗುಣಗಳು. ಈ ಅಂಶಗಳನ್ನು ತಮ್ಮ ಬರವಣಿಗೆಯಲ್ಲಿ ಅಳವಡಿಸಿಕೊಳ್ಳುವುದರಲ್ಲಿ ದೇವರಾಜ್ ಯಶಸ್ವಿಯಾಗಿದ್ದಾರೆ.

ಲಲಿತ ಪ್ರಬಂಧಗಳನ್ನು ಬರೆಯುವುದು ಅಥವಾ ನಿಯತಕಾಲಿಕ ಪತ್ರಿಕೆಗಳಲ್ಲಿ ಸಾಮಾನ್ಯ ಓದುಗರಿಗೆ ತಲುಪಿಸಲು ಬರೆದಿರುವ ಸಾಂದರ್ಭಿಕ ಲೇಖನಗಳಲ್ಲ ಇವು. ಇತರೆ ಅಧ್ಯಯನಶೀಲರ ಪರಿಶೀಲನೆಗೆ ಒದಗುವ ವಿಧಾನದಲ್ಲಿ ಬರೆಯಲಾಗಿರುವ ಬರಹಗಳಿವು. ತಮ್ಮ ಮೊದಲ ಕೃತಿಯಲ್ಲೇ ದೇವರಾಜ್ ಈ ಬಗೆಯ ಪರಿಶ್ರಮವನ್ನು ಪ್ರದರ್ಶಿಸಿರುವುದು ಸ್ವಾಗತಾರ್ಹ ಹಾಗೂ ಮೆಚ್ಚಲರ್ಹ ಸಂಗತಿಯಾಗಿದೆ. ಅವರ ಅಧ್ಯಯನ ಪ್ರೀತಿ ಹೀಗೇ ಬೆಳೆಯಲಿ. ವ್ಯಾಪಕಗೊಳ್ಳಲಿ, ಮತ್ತಷ್ಟು ಒಳನೋಟದ, ಹೆಚ್ಚಿನ ವಿಶ್ಲೇಷಣೆಯ ಕೃತಿಗಳು ಸಾಹಿತ್ಯದ ಬಗ್ಗೆ, ರಾಜಕೀಯಾರ್ಥಿಕ ವಿಷಯಗಳ ಬಗ್ಗೆ ಪ್ರಕಟಗೊಳ್ಳಲಿ ಎಂದು ನಾನು ಹಾರೈಸುತ್ತಿದ್ದೇನೆ.