Skip to main content

Gandhakuti

ಬಹುಶಃ ನಾವು ಬರವಣಿಗೆಯನ್ನು ಆರಂಭ ಮಾಡುವ ಹೊತ್ತಿನಲ್ಲಿ ದೊಡ್ಡ ಬರಹಗಾರರು ಎನಿಸಿಕೊಂಡವರು ಹತ್ತಿರಕ್ಕೆ ಬಿಟ್ಟುಕೊಳ್ಳುತ್ತಿದುದು ತುಂಬಾ ಕಡಿಮೆ. ಅದರಲ್ಲೂ ಹಳ್ಳಿಯಿಂದ ಬಂದ ನಮ್ಮಂತಹವರಿಗೆ ಸಂಕೋಚದ ಕಾರಣಕ್ಕೆ ದೊಡ್ಡವರಿಂದ ದೂರವನ್ನೇ ಕಾಪಾಡಿಕೊಂಡಿದ್ದೇವು ಎನಿಸುತ್ತದೆ.

ನಮ್ಮಂತಹ ರೀತಿಯ ಹೊಸ ತಲೆಮಾರನ್ನು ಪೊರೆಯುವ ಕೆಲವೇ ಕೆಲವು ಚಿಂತಕರಲ್ಲಿ ಬಂಜಗೆರೆ ಒಬ್ಬರು.

90ರ ದಶಕದ ಕೊನೆ. ಆಗ ನಾವು ಎಂಎ ಮಾಡುತ್ತಿದ್ದೆವು. ಆ ವಯಸ್ಸಿನಲ್ಲಿ ಒಣವೈಚಾರಿಕತೆಯ ಉತ್ತುಂಗ ಶಿಖರದಲ್ಲಿದ್ದೇವು‌. ಅದಕ್ಕೆ ಭಗವಾನರ “ಶಂಕರಾಚಾರ್ಯರು ಮತ್ತು ಪ್ರತಿಗಾಮಿತನ” ರಂತಹ ಕೃತಿಗಳು ಕಾರಣವಾಗಿದ್ದವು ಎನಿಸುತ್ತದೆ. ಅವುಗಳಿಂದ ಬಿಡುಗಡೆ ಪಡೆದದ್ದು ತರೀಕೆರೆಯವರ ‘ ಪ್ರತಿ ಸಂಸ್ಕೃತಿ, ಮರದೊಳಗಣ ಕಿಚ್ಚು ಮತ್ತು ಬಂಜೆಗೆರೆಯವರ “ಇದೇ ರಾಮಾಯಣ” ಕೃತಿಗಳು. ಇವರಿಬ್ಬರ ಹೆಸರು ಕೇಳಿದ್ದೇ ಆಗ.

ನಮ್ಮ ಸೀಮಿತ ಓದಿಗೆ ಇವೇ ದಾರಿಸೂಚಕವಾಗಿದ್ದವು. ಮುಂದುವರಿದು ಅವರಿಬ್ಬರ ಚರ್ಚೆಯ ಸರಣಿಯನ್ನು ಮೇಷ್ಟ್ರು ರಾಜಪ್ಪ ದಳವಾಯಿಯವರು ನೀಡಿದರು . ದಳವಾಯಿಯವರು ಸಂಪಾದಿಸುತ್ತಿದ್ದ ‘ಪ್ರಜ್ಞೆ’ ಪತ್ರಿಕೆಯ ಹಳೆ ಸಂಚಿಕೆಗಳನ್ನು‌ ಓದಲು ನೀಡಿದ್ದರು. ಅಲ್ಲಿ ರಹಮತ್ ತರೀಕೆರೆ ಮತ್ತು ಬಂಜೆಗೆರೆಯವರ ನಡುವಿನ ‘ಪರಂಪರೆಯನ್ನು ಅರ್ಥಮಾಡಿಕೊಳ್ಳುವುದು ಹೇಗೆ?’ ಎಂಬ ಚರ್ಚಾ ಸರಣಿ ನಮಗೆ ಹೊಸದಾಗಿತ್ತು..

ಅದಾದ ಮೇಲೆ ಎಂ.ಎ ಮುಗಿಸಿ ಕನ್ನಡ ವಿಶ್ವವಿದ್ಯಾಲಯಕ್ಕೆ ಪಿಎಚ್.ಡಿ ಗೆಂದು ನಾನು , ಮಧುಗಿರಿ ನಾಗಭೂಷಣ, ಗಂಗಭೈರಯ್ಯ, ಮುದ್ದುವೀರಪ್ಪ, ಹನುಮಂತರಾಯ, ನಾಗಭೂಷಣ ಬಗ್ಗನಡು ಎಲ್ಲಾ ರಾಜಪ್ಪ ದಳವಾಯಿಯವರ ಮುಂದಾಳತ್ವದಲ್ಲಿ ಕೋಳಿಪಿಳ್ಳೆಗಳಂತೆ ಸೇರಿಕೊಂಡೆವು. (ತರೀಕೆರೆ ಅವರ ಮಾತಿನಲ್ಲಿ “ದಳವಾಯಿಯವರಿಂದ ಕನ್ನಡ ವಿವಿಗೆ ದಬ್ಬಿಸಿಕೊಂಡಿದ್ದೇವು”)

ನಾವು ಸೇರಿದ ದಿನವೇ ಬಂಜಗೆರೆ ಅವರ ಬಗೆಗೆ ನನ್ನ ಗೆಳೆಯ ಕೌತುಕದ ಕತೆಯನ್ನು ಹೇಳಿದ್ದ. ಬಂಜಗೆರೆ ಅವರು ಆಗ ಅಲ್ಲಿ ಡಿ.ಲಿಟ್ ಮಾಡಲು ಬಂದಿದ್ದರು. ಅರ್ಜಿಯಲ್ಲಿ ಸಾರಲೇಖ‌ ಸೇರಿಸಿಲ್ಲ ಎಂದು ಕ್ಲರ್ಕ್ ಹೇಳಿದಾಗ ಬಂಜಗೆರೆಯವರು ಆ ಕ್ಲರ್ಕ್ ಹತ್ತಿರ ಒಂದು ಹಾಳೆ‌ತಗೊಂಡು‌ ಅಲ್ಲೇ ಬರೆದು ಸಲ್ಲಿಸಿದರು’ ಎಂದು‌. ಸಾರಲೇಖ‌ ಬರೆಯಲು‌ ತಿಂಗಳಾನುಗಟ್ಟಲೆ ಸಮಯ ತೆಗೆದುಕೊಳ್ಳುವವರ ಮುಂದೆ ಕ್ಷಣಮಾತ್ರದಲ್ಲೇ ಸಿದ್ಧವಾಗಿದ್ದು ನಮ್ಮೆಲ್ಲರ ಕೌತುಕಕ್ಕೆ ಇನ್ನಷ್ಟು ಇಂಬು ನೀಡಿತ್ತು.. ಆದರೆ ಅವರ‌ ದರ್ಶನವೇ ಆಗಿರಲಿಲ್ಲ..

ಅದಾದ ಮೇಲೆ ಕನ್ನಡ ವಿಶ್ವವಿದ್ಯಾಲಯದ ಮೊದಲನೇ ವರ್ಷದ ಸಂಶೋಧನಾ ಕಮ್ಮಟ ಆಯೋಜಿಸಿತ್ತು . ಆ ಕಮ್ಮಟದಲ್ಲಿ ಇನ್ ಶರ್ಟ್ ಮಾಡಿರುವ, ಜೀನ್ಸ್ ಪ್ಯಾಂಟ್ ತೊಟ್ಟ, ಕೈನಲ್ಲಿ ರೌಡಿ ಬಳೆಯಂತಿರುವ ಬಳೆ ಧರಿಸಿ ಕೂದಲನ್ನು ಹಿಂದಕ್ಕೆ ಬಾಚಿಕೊಂಡಿರುವ, ನೋಡಲು ಥೇಟ್ ರೌಡಿಯಂತೆ ಕಾಣುತ್ತಿದ್ದವರೊಬ್ಬರಿದ್ದರು. ‘ಇಂಥವರಲ್ಲ ಪಿಎಚ್ಡಿ ಮಾಡ್ತಾರಾ ? ಅಂತ ಅವರನ್ನು ನೋಡಿದ ನಾವೆಲ್ಲಾ ಮಾತನಾಡಿಕೊಂಡೆವು. ಕಾರ್ಯಕ್ರಮದಲ್ಲಿ ‘ಸಮಾಜ ವಿಜ್ಞಾನಗಳ ಸಂಶೋಧನೆ’ ಕುರಿತು ಮಾತನಾಡಲು ಬಂಜಗೆರೆ ಜಯಪ್ರಕಾಶ್ ವೇದಿಕೆಗೆ ಬರಬೇಕೆಂದು ನಿರೂಪಕರು ಹೇಳಿದಾಗ ನಮಗೆ ರೋಮಾಂಚನ ಬಂಜಗೆರೆ ಅವರನ್ನು ಮೊದಲ ಬಾರಿಗೆ ನೋಡುತ್ತೇವೆ ಎಂದು.

ಆದರೆ ನಾವು ಅನುಮಾನದಿಂದ ನೋಡುತ್ತಿದ್ದ ವ್ಯಕ್ತಿಯೇ ಎದ್ದು ವೇದಿಕೆಯ ಕಡೆ ನಡೆದರು. ಸಾಹಿತ್ಯದ ಸಮವಸ್ತ್ರವಿಲ್ಲದ ಚಿಂತಕರನ್ನು ಮೊದಲ ಬಾರಿಗೆ ನೋಡಿದ್ದು..

ಅದಾದಮೇಲೆ ಅವರ ಬರಹಗಳನ್ನು ಮತ್ತಷ್ಟು ಓದಿದ್ದುಂಟು. ಅಪರಿಚಿತ ಆದ ನಾನು ನನ್ನ ” ಜಲಜಂಬೂ ಕನ್ನೆ” ಖಂಡಕಾವ್ಯಕ್ಕೆ ಮುನ್ನುಡಿಬೇಕೆಂದು ಬಂಜಗೆರೆ ಅವರಿಗೆ ಫೋನ್ ಮಾಡಿ ಕೇಳಿದೆ. ಅವರು ಮೈಲ್ ಮಾಡು ಎಂದು ತಿಳಿಸಿದರು.

ನಾನು ಮೈಲ್ ಮಾಡಿದ 15 ದಿನಕ್ಕೆ ಮರುಮೈಲ್ ಬಂತು ಅದರಲ್ಲಿ ತುಂಬಾ ಗಂಭೀರವಾದ ಒಳನೋಟಗಳುಳ್ಳ ಮುನ್ನುಡಿ ಇತ್ತು . ಪರಿಚಯವಿಲ್ಲದವರಿಗೂ‌ ಇಷ್ಟೊಂದು ಸಮಯ ಕೊಟ್ಟು ಬರೆದದ್ದು ಮತ್ತಷ್ಟು ಅಭಿಮಾನಕ್ಕೆ ಕಾರಣವಾಗಿತ್ತು.

ಯಾವಾಗಲಾದರೂ ಒಮ್ಮೆ ತುಮಕೂರಿಗೆ ಬಂದಾಗ ನನ್ನ ಹೆಸರು ಹೇಳಿ ಪರಿಚಯ ಮಾಡಿಕೊಳ್ಳುತ್ತಿದ್ದೆ. ತುಂಬಾ ಆಪ್ತರಂತೆ‌ ಮಾತನಾಡುವ ಅವರ ಗುಣ ಮತ್ತಷ್ಟು ಹತ್ತಿರ ಮಾಡಿತ್ತು. ಮುಂದೆ ಓದಿನ ಮೂಲಕ ಸಿಕ್ತಾ ಹೋಯ್ತು..

ಅದಾದಮೇಲೆ ಮಲೆ ಮಾದೇಶ್ವರ ಬೆಟ್ಟದ ಮೇಲೆ ಸಾಂಸ್ಕೃತಿಕ ಮೀಮಾಂಸೆ ಕುರಿತ ಕಮ್ಮಟದಲ್ಲಿ ಮತ್ತೆ ಸೇರಿದ್ದೆವು.

ಅವರ “ಆನು ದೇವ ಹೊರಗಣನವನು” ಸಂಶೋಧನಾ ಕೃತಿ ಅನೇಕ ಹೊಸ ದಾರಿಗಳನ್ನು ತೆರೆದಿತ್ತು. ಅದು ವಿವಾದಕ್ಕೆ ಒಳಗು ಮಾಡಿದ್ದು ದುರಂತ. ಆಗ ತುಮಕೂರಿನಲ್ಲಿ ಹಿರಿಯ ದಿವಂಗತ ಚೇಳೂರು ವೆಂಕಟೇಶ್ ಈ ಕೃತಿಯ ಚರ್ಚೆಯನ್ನು ಇಟ್ಟುಕೊಂಡಿದ್ದರು. ಆಗ ಅವರು ಮತ್ತಷ್ಟು ಹತ್ತಿರವಾದರು.

ಬಹುಪಾಲು ನನ್ನ ವಿದ್ಯಾರ್ಥಿಗಳ ಅಥವಾ ಹೊಸಬರ ಕೃತಿಗಳಿಗೆ ಮುನ್ನುಡಿ ಬೇಕೆಂದರೆ ತಕ್ಷಣ ನೆನಪಾಗುತ್ತಿದ್ದುದ್ದು ಬಂಜಗೆರೆಯವರೇ. ಯಾವುದೇ ತಡವಿಲ್ಲದೆ ಒಳನೋಟಗಳಿಂದ ಮುನ್ನುಡಿಯನ್ನು ಬರೆದು ಹೊಸಬರನ್ನು ಪ್ರೋತ್ಸಾಹಿಸುತ್ತಿದ್ದರು.

ಹೋರಾಟದಲ್ಲಿಯೂ ನಾವು ಬಿಇಡಿ ಮಾಡಿಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಕರಾರು ಇತ್ತಾಗ ಕಾಳೇಗೌಡ ನಾಗವಾರ, ಎಚ್ ಗೋವಿಂದಯ್ಯ ಪ. ಮಲ್ಲೇಶ್ ಮುಂತಾದವರೊಂದಿಗೆ ಬಂಜಗೆರೆಯವರು ಮುಂದಾಳುವಾಗಿ ನಮಗೆ ಬಿಇಡಿ ವಿದ್ಯಾಭ್ಯಾಸ ಮಾಡಲು ಸರ್ಕಾರದಿಂದಲೇ ಅನುಮತಿ ಪತ್ರವನ್ನು ಆಗಿನ ಸಿಎಂ ಸಿದ್ದರಾಮಯ್ಯನವರಿಂದ ಕೊಡಿಸಿದ್ದರು.

ಅದರ ಜೊತೆಗೆ ಸಂಸ್ಕೃತಿ ಅಧ್ಯಯನಕ್ಕೆ ತೊಡಗಿಕೊಂಡಾಗ ಅವರ ಅಧ್ಯಯನ ಮತ್ತು ಅನುವಾದ ಕೃತಿಗಳು ಕೈ ಹಿಡಿದು ನಡೆಸಿವೆ. ಕಳೆದ ಕಾಲದ ಪ್ರೇಯಸಿಯರು, ಮಹೂವಾ ಮುಂತಾದವೆಲ್ಲಾ ಈಗಲೂ ಕಾಡುತ್ತಿವೆ.

ಪ್ರಾಧಿಕಾರದ ಅಧ್ಯಕ್ಷರಾದಾಗ ವಿದ್ಯಾರ್ಥಿಗಳ ಓದು, ಸಿರಿಗನ್ನಡ ಪುಸ್ತಕಮನೆ, ಥರ್ಸ್ಟನ್ “ದಕ್ಷಿಣ ಭಾರತದ ಜಾತಿ ಬುಡಕಟ್ಟುಗಳು” ಸಂಪುಟಗಳು ನನ್ನ ಅಧ್ಯಯನಕ್ಕೆ ಈಗಲೂ ಆಕಾರ ಕೃತಿಗಳಾಗಿವೆ..

ಚಳುವಳಿ, ಹೊಸಬರೊಂದಿಗಿನ ಒಡನಾಟ ಅವರ ಅಪ್ಪಿಕೊಳ್ಳುವಿಕೆ, ಚಿಂತನೆಯ ರೂಪ ಇವೆಲ್ಲ ಬಂಜಗೆರೆಯವರಿಂದ ನಾನು ಕಂಡ ಬಹುಮುಖ್ಯ ಅಂಶಗಳು.