Gandhakuti

ಭಕ್ತಿ ಚಳವಳಿಯ ತೀವ್ರಗಾಮಿ ಸಂತ ರವಿದಾಸ್ (ಕ್ರಿ.ಶ. 1450-1520) ತನ್ನನ್ನು ತಾನು ‘ಈಗ ಸ್ವತಂತ್ರನಾಗಿರುವ ಚಮ್ಮಾರ’ ಎಂದು ಕರೆದುಕೊಳ್ಳುತ್ತಾನೆ. ತನ್ನ “ಬೇಗಂಪುರ” ಹಾಡಿನಲ್ಲಿ ಭಾರತೀಯ ಆದರ್ಶರಾಜ್ಯವನ್ನು – ಒಂದು ಆಧುನಿಕ ಜಾತಿರಹಿತ, ವರ್ಗರಹಿತ, ತೆರಿಗೆ-ಮುಕ್ತ ನಗರವನ್ನು -ಮೊದಲು ಕಲ್ಪಿಸಿಕೊಂಡವನು. ಇದು ಬ್ರಾಹ್ಮಣೀಯ ಕಲಿಯುಗದ ನರಕಸದೃಶ ಕಲ್ಪನೆಗೆ ವ್ಯತಿರಿಕ್ತವಾಗಿತ್ತು.

ಭಾರತವನ್ನು ‘ಪುನಃಶೋಧಿಸಲು’ ಪೌರಸ್ತ್ಯವಾದಿ, ರಾಷ್ಟ್ರೀಯವಾದಿ ಮತ್ತು ಹಿಂದುತ್ವವಾದಿ ಪ್ರವೃತ್ತಿಗಳನ್ನು ತಿರಸ್ಕರಿಸುತ್ತಾ, ಗೇಲ್ ಓಮ್ವೆಟ್ ಅವರು ಐದು ಶತಮಾನಗಳ ಅವಧಿಯಲ್ಲಿ ವ್ಯಾಪಿಸಿಕೊಂಡಿರುವ ತಳಸ್ತರೀಯ ದಾರ್ಶನಿಕರ ವಿಶ್ವ ದೃಷ್ಟಿಕೋನವನ್ನು ಒಟ್ಟುಗೂಡಿಸಿ ಇಲ್ಲಿ ನೀಡಿದ್ದಾರೆ – ಚೋಖಾಮೇಳ, ಜನಾಬಾಯಿ, ಕಬೀರ್, ರವಿದಾಸ್, ತುಕಾರಾಂ, ಕರ್ತಾಭಜ, ಫುಲೆ, ಅಯೋತಿ ದಾಸ್, ಪಂಡಿತಾ ರಮಾಬಾಯಿ, ಪೆರಿಯಾರ್ , ಅಂಬೇಡ್ಕರ್ ಇವರ ದೃಷ್ಟಿಕೋನವು ಗಾಂಧಿಯವರ ರಾಮರಾಜ್ಯ ಆದರ್ಶದ ಗ್ರಾಮರಾಜ್ಯ, ನೆಹರು ಅವರ ಹಿಂದೂತ್ವ-ಲೇಪಿತ ಬ್ರಾಹ್ಮಣೀಯ ಸಮಾಜವಾದ ಮತ್ತು ಸಾವರ್ಕರ್ ಅವರ ಪ್ರಾದೇಶವಾದಿ ಹಿಂದೂ ರಾಷ್ಟ್ರ ಪರಿಕಲ್ಪನೆಗಳಿಗೆ ವ್ಯತಿರಿಕ್ತವಾಗಿದೆ. ತಾರ್ಕಿಕತೆ ಮತ್ತು ಭಾವಪರವಶತೆ-ಜ್ಞಾನ ಮತ್ತು ಭಕ್ತಿಗಳ-ಪಥವು ‘ವಾಗ್ದಾನಿತ’ ನಾಡಿಗೆ ಕರೆದೊಯ್ಯುತ್ತದೆ.

ಗೇಲ್ ಓಮ್ವೆಟ್ ಅವರು ‘ದಲಿತ್ ಅಂಡ್ ದ ಡೆಮಾಕ್ರಟಿಕ್ ರೆವಲ್ಯೂಷನ್’, ‘ಬುದ್ಧಿಸಂ ಇನ್ ಇಂಡಿಯಾ: ಚಾಲೆಂಜಿಂಗ್ ಬ್ರಾಹ್ಮಣಿಸಂ ಅಂಡ್ ಕ್ಯಾಸ್ಟ್’ ಮತ್ತು ‘ಅಂಬೇಡ್ಕರ್: ಟುವರ್ಡ್ಸ್ ಆ್ಯನ್ ಎನ್ಲೈಟನ್ಡ್ ಇಂಡಿಯಾ’ ಮತ್ತಿತರ ಪುಸ್ತಕಗಳ ಲೇಖಕರಾಗಿದ್ದಾರೆ.

ಡಾ. ಬಂಜಗೆರೆ ಜಯಪ್ರಕಾಶ ಕನ್ನಡದ ಹೆಸರಾಂತ ಲೇಖಕ, ಸಂಸ್ಕೃತಿ ಚಿಂತಕ ಮತ್ತು ಸಾಮಾಜಿಕ ಹೋರಾಟಗಾರರಾಗಿದ್ದು ಇಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ. ಅಲ್ಲದೆ, ಇಂಗ್ಲಿಷ್ ಮತ್ತು ತೆಲುಗು ಭಾಷೆಗಳ ಹಲವು ಕೃತಿಗಳ ಅನುವಾದಕರೂ ಆಗಿದ್ದಾರೆ.